Connect with us
Loading...
Loading...

ಅಂಕಣ

“ಪ್ರಾಣವನ್ನಾದರೂ ಬಿಟ್ಟೇನು, ಆದರೆ ನನ್ನ ಧರ್ಮವನ್ನು ಬಿಡುವುದಿಲ್ಲ” ಎಂದು ಪ್ರಾಣಾರ್ಪಣೆ ಮಾಡಿದ ಆ ಮಹಾಪುರುಷನ ಬಗ್ಗೆ ನಿಮಗೆ ಗೊತ್ತಾ?

Published

on

 • 1.4K
 •  
 •  
 •  
 •  
 •  
 •  
 •  
  1.4K
  Shares

ಭಾರತದ ಮೇಲೆ ಶತ ಶತಮಾನಗಳಿಂದಲೂ ವಿದೇಶಿಯರು ದಾಳಿ ಮಾಡಿದ್ದಾರೆ. ಕೊನೆಗೆ ದಾಳಿ ಮಾಡಿದವರು ಬ್ರಿಟಿಷರು. ಇವರು ದಾಳಿ ಮಾಡುವ ಮುಂಚೆ ಅದೆಷ್ಟೋ ವಿದೇಶಿಯರ ದಾಳಿಯನ್ನು ಭಾರತ ವೀರರು, ವೀರಾಂಗಿಣಿಯರು ಹಿಮ್ಮೆಟ್ಟಿಸಿದ್ದರು.

ಬ್ರಿಟಿಷರು ಭಾರತಕ್ಕೆ ವ್ಯಾಪಾರದ ಸೋಗಿನಲ್ಲಿ ಬಂದು ಕ್ರೈಸ್ತೀಕರಣದ ಕೆಲಸ ಮಾಡಿದ್ದರು. ಇವರಿಗಿಂತಲೂ ಮುಂಚೆ ಮುಸಲ್ಮಾನರು ಅದೆಷ್ಟೋ ಸಲ ಭಾರತದ ಮೇಲೆ ದಾಳಿ ಮಾಡಿ, ಹಿಂದೆಂದೂ ಕಂಡು ಕೇಳರಿಯದಂತಹ ರಕ್ತಪಾತ ಮಾಡಿದ್ದರು.

ಭಾರತದಲ್ಲಿ ಮುಸಲ್ಮಾನರ ದಾಳಿ ಆದದ್ದು ಮೊದಲಿಗೆ ವಾಯುವ್ಯ ಸರಹದ್ದಿನ ಪ್ರಾಂತಗಳು ಮತ್ತು ಪಂಜಾಬಿನ ಮೇಲೆ. ನಿರತಂರ ದಾಳಿಯಿಂದ ಸುಮಾರು 14-15 ನೆಯ ಶತಮಾನದ ವೇಳೆಗೆ ಆ ಪ್ರದೇಶಗಳಲ್ಲೆಲ್ಲ ಹಿಂದುಗಳ ಸ್ಥಿತಿ ಹೇಳಲಿಕ್ಕಾಗದೇ ಇರುವ ರೀತಿಯದ್ದಾಗಿತ್ತು.

ದಾಳಿಯೆಂದರೆ ಬರೋದು ಕೊಲ್ಲುವುದು ಮಾತ್ರವಾಗಿರಲಿಲ್ಲ. ದಾಳಿ ಮಾಡಿದ ಮುಸಲ್ಮಾನರೆಲ್ಲಾ ಭಾರತದ ಇಸ್ಲಾಮೀಕರಣದ ಉದ್ದೇಶದಿಂದ ದಾಳಿ ಮಾಡಿದ್ದರು. ಹಿಂದುಗಳ ಬಲವಂತದ ಮತಾಂತರ, ಮತಾಂತರಕ್ಕೆ ಒಪ್ಪದವರ ಮೇಲೆ ಹೇಳಲಸಾಧ್ಯವಾದ ಬರ್ಬರ ಅತ್ಯಾಚಾರ ನಡೆಸಿದ್ದರು‌.

ಶ್ರೀ ಕೃಷ್ಣ ಪರಮಾತ್ಮ ತಾನು ಹೇಳಿದಂತೆ ಅಧರ್ಮ ತಲೆ ಎತ್ತಿದಾಗ, ಧರ್ಮವನ್ನು ಕಾಪಾಡಲು ನಾನು ಅವತರಿಸಿ ಬರುತ್ತೇನೆಂದು, ಒಬ್ಬ ಮಹಾಪುರುಷನ ರೂಪದಲ್ಲಿ ಅವತರಿಸಿ ಬಂದ. ಆ ಅವತಾರವೇ “ಗುರು ನಾನಕ್”.

ಧರ್ಮ ರಕ್ಷಣೆಗಾಗಿ ಮೈಗೊಡವಿ ಎದ್ದು ಬಂದ ಗುರು ನಾನಕರು ಹಿಂದೂ ಧರ್ಮದ ರಕ್ಷಣೆಗಾಗಿ ಒಂದು ಪಂಥವನ್ನು ಸ್ಥಾಪಿಸಿದರು. ಅದಕ್ಕೆ ಅವರು ಇಟ್ಟ ಹೆಸರೇ ಸಿಖ್.


ಗುರುನಾನಕರು ಹಿಂದೂ ಧರ್ಮದ ರಕ್ಷಣೆಗಾಗಿ ಸಿಖ್ ಪಂಥವನ್ನು ಸ್ಥಾಪಿಸಿದರು. ಅವರ ನಂತರ ಆ ಪಂಥವನ್ನು ಒಬ್ಬರ ಹಿಂದೆ ಒಬ್ಬರಂತೆ ಗುರುಗಳು ನಡೆಸಿಕೊಂಡು ಬಂದರು. ಗುರು ನಾನಕ ನಂತರ ಬಂದ ಗುರುಗಳ ಸಾಲಿನಲ್ಲಿ ಹತ್ತನೇ ಗುರು ಗೋವಿಂದಸಿಂಹ.

ಸಿಖ್ಖರ ಒಂಬತ್ತನೇ ಗುರು, ಗುರು ತೇಗಬಹಾದ್ದೂರ ಹಾಗೂ ಗುಜರಿಬಾಯಿಯ ಪುತ್ರನಾದ ಗೋವಿಂದ ಸಿಂಗರ ಜನನವಾಗಿದ್ದು 1666 ನೇ ಡಿಸೆಂಬರ 22ರಂದು.

ತನ್ನ 4ನೇ ವಯಸ್ಸಿನಲ್ಲಿಯೇ ವೇದ ಪಾಠ, ಯುದ್ಧವಿದ್ಯೆಯ ಶಿಕ್ಷಣ ಆರಂಭಿಸಿದ ಗೋವಿಂದರಾಯ ಅಸಾಮಾನ್ಯ ಬುದ್ಧಿವಂತ ಜೊತೆಗೆ ಪರಾಕ್ರಮಿಯೂ ಆಗಿದ್ದ. ಗೋವಿಂದರಾಯನು ಚಿಕ್ಕ ವಯಸ್ಸಿನಲ್ಲಿಯೇ ಸ್ವಾಭಿಮಾನಿ, ಸಾಹಸಿ, ನಿರ್ಭೀಕ ಹಾಗೂ ಅನ್ಯಾಯವನ್ನು ವಿರೋಧಿಸುವ ಸ್ವಭಾವದವನಾಗಿದ್ದ.

1672ರಲ್ಲಿ ಪಾಟ್ನಾದ ನವಾಬರ ಸವಾರಿ ಆಗಮಿಸಿದ್ದ ಸಂದರ್ಭ. ಆಟವಾಡುತ್ತಿದ್ದ ಗೋವಿಂದರಾಯ ಮತ್ತು ಜೊತೆಯಲ್ಲಿದ್ದ ಬಾಲಕರಿಗೆ ವಂದನೆ ಸಲ್ಲಿಸಲು ತಿಳಿಸಲಾಯಿತು. ಆದರೆ ಸ್ವಾಭಿಮಾನಿ ಬಾಲಕ ಗೋವಿಂದರಾಯನು ತಾನು ಮಾತ್ರವಲ್ಲ, ಉಳಿದ ಬಾಲಕರನ್ನು ಸಹ ಬಗ್ಗಿ ನಮಸ್ಕರಿಸಲು ಬಿಡಲಿಲ್ಲ.

ತನ್ನ ಒಂಬತ್ತನೇ ವಯಸ್ಸಿನಲ್ಲಿ ಗೋವಿಂದರಾಯನು ಪಂಜಾಬಿಗೆ ಬಂದ. ಆಗೊಮ್ಮೆ ಕಾಶ್ಮೀರ ಹಾಗೂ ಅನೇಕ ಪ್ರಾಂತಗಳ ಹಿಂದುಗಳು ಗುರು ತೇಗಬಹಾದ್ದೂರರನ್ನು ಭೇಟಿಯಾಗಿ ಔರಂಗಜೇಬನ ಅತ್ಯಾಚಾರದಿಂದ ಮುಕ್ತಿ ನೀಡಲು ವಿನಂತಿಸಿದರು.

ಆಗ ಗುರುಗಳು ಈ ಸಂದರ್ಭದಲ್ಲಿ ಯಾರಾದರೂ ಮಹಾತ್ಮರು ತಮ್ಮ ಪ್ರಾಣ ಕೊಟ್ಟರೆ ಮಾತ್ರ ಧರ್ಮ ಉಳಿಯಬಲ್ಲದು ಎಂದರು. ಆಗ ಪಕ್ಕದಲ್ಲಿದ್ದ ಬಾಲಕ ಗೋವಿಂದರಾಯನು ‘ಅಪ್ಪಾಜಿ, ಈಗ ನಿಮಗಿಂತ ದೊಡ್ಡ ಮಹಾತ್ಮರು ಇನ್ನಾರಿದ್ದಾರೆ’ ಎನ್ನುವ ಮೂಲಕ ತಂದೆಯು ಸವಾಲು ಸ್ವೀಕರಿಸಲು ಪ್ರೇರಣೆ ನೀಡಿದ.

ಔರಂಗಜೇಬನು ಗುರುವನ್ನು ಚಿತ್ರಹಿಂಸೆಗೆ ಗುರಿಪಡಿಸಿದ. ಆದರೂ ಗುರುವು ಮುಸಲ್ಮಾನನಾಗಲು ಒಪ್ಪಲಿಲ್ಲ. “ಪ್ರಾಣವನ್ನಾದರೂ ಬಿಟ್ಟೇನು, ಆದರೆ ನನ್ನ ಧರ್ಮವನ್ನು ಬಿಡುವುದಿಲ್ಲ” ಎಂದು ಖಡಾಖಂಡಿತವಾಗಿ ಹೇಳಿದ.

ಆಗ ದೆಹಲಿಯ ಚಾಂದನಿ ಚೌಕದಲ್ಲಿ ಗುರುವಿನ ತಲೆಯನ್ನು ಕಡಿದುಹಾಕಬೇಕೆಂದು ಔರಂಗಜೇಬ ಅಪ್ಪಣೆ ಮಾಡಿದ. ತನ್ನ ತಲೆ ಕಡಿದು ಬೀಳುವಾಗಲೂ ಗುರು ತೇಗಬಹುದ್ದೂರ್ ಮಾತ್ರ ಶಾಂತ ಮನಸ್ಸಿನಿಂದ ದೇವರ ಧ್ಯಾನದಲ್ಲಿ ಮುಳುಗಿದ್ದ.

ತಂದೆಯ ಈ ಬಲಿದಾನದ ವಾರ್ತೆ ಕೇಳಿ, ಹುಡುಗ ಗೋವಿಂದರಾಯನು ಗೋಳಾಡಿದನೇ? ಇಲ್ಲ. ಅವನು ಏನು ಹೇಳಿದ ಗೊತ್ತಾ? “ನನ್ನ ತಂದೆ ತನ್ನ ಪ್ರಾಣವನ್ನೇ ಕೊಟ್ಟ, ಆದರೆ ಹಿಂದು ಧರ್ಮದ ಗೌರವವನ್ನು ಮಾತ್ರ ಬಿಟ್ಟು ಕೊಡಲಿಲ್ಲ. ಆ ಕಲಿಯುಗದಲ್ಲಿ ಎಂಥ ಅದ್ಭುತವಾದ ಕೆಲಸ ಮಾಡಿದ ನನ್ನ ತಂದೆ!”

ತನ್ನ ಎಳೆ ವಯಸ್ಸಿನಲ್ಲಿಯೇ ಇಂತಹ ತೇಜಸ್ಸನ್ನು ಮೆರೆದವನು ಗುರು ಗೋವಿಂದಸಿಂಹ. ತಂದೆಯಂತೆಯೇ ಅವನ ಮುತ್ತಾತ ಗುರು ಅರ್ಜುನದೇವನೂ ದಿಲ್ಲಿಯ ಮೊಗಲ್ ಬಾದಶಹ ಜಹಂಗೀರನ ಕೈಯಲ್ಲಿ ನಾನಾ ವಿಧವಾದ ಚಿತ್ರಹಿಂಸೆಗಳನ್ನು ಅನುಭವಿಸಿ ಸತ್ತಿದ್ದ. ಆದರೆ ಧರ್ಮವನ್ನು ಮಾತ್ರ ಬಿಡಲಿಲ್ಲ. ಅಂತಹ ಸಾವಿಗೆ ಅಂಜದವರ ವಂಶದಲ್ಲಿ ಜನಿಸಿದವನು ಗೋವಿಂದಸಿಂಹ.

ಆಗಿನ ಸ್ಥಿತಿಯಲ್ಲಿ ಹಿಂದೂ ಧರ್ಮದ ರಕ್ಷಣೆಗೆ ಮತ್ತೊಬ್ಬ ಮಹಾಪುರುಷನ ಅವಶ್ಯಕತೆ ಇತ್ತು. ಆಗಲೇ ಗುರು ಗೋವಿಂದ ರಾಯರು ಹತ್ತನೇ ಗುರುವಾಗಿ ಜವಾಬ್ದಾರಿ ವಹಿಸಿಕೊಂಡು ಗುರುಗೋವಿಂದ್ ಸಿಂಗರಾದರು.

ಅಂದಿನ ಸ್ಥಿತಿ ಹೇಗಿತ್ತು ಗೊತ್ತಾ?

ಹಿಂದುಗಳು ಶಸ್ತ್ರ ಧರಿಸಬಾರದು, ಗಡ್ಡ-ಕೂದಲು ಬೆಳೆಸಬಾರದು, ಕುದುರೆ ಸವಾರಿ ಮಾಡಲಾಗದು, ಧಾರ್ಮಿಕ ಆಚರಣೆ ಮಾಡಬಾರದೆಂಬ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಗುರು ಗೋವಿಂದಸಿಂಹರು ಅಂದಿನ ಭಯಾನಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರು.

ಈ ಪರಕೀಯ, ಅತ್ಯಾಚಾರಿ ಶಾಸನದಿಂದ ಮುಕ್ತಿ ಪಡೆಯಲು ಕೇವಲ ಶಸ್ತ್ರ ಸಜ್ಜಿತ ಸೈನ್ಯಪಡೆ ಮಾತ್ರ ಸಾಲದು, ಜನ ಸಾಮಾನ್ಯರ ಹೃದಯದಲ್ಲಿ ಸ್ವಾಭಿಮಾನ, ಪರಾಕ್ರಮ ತುಂಬಿ, ಸ್ವಾತಂತ್ರ್ಯದ ಹಂಬಲ ಬೆಳೆಸಬೇಕೆಂದು ಸಂಕಲ್ಪಿಸಿದರು.

ಹೂಹಾರ, ಹಣ್ಣು, ಸುಂದರ ಉಡುಪುಗಳ ಬದಲು; ಖಡ್ಗ, ಕತ್ತಿಯಂತಹ ಉತ್ತಮ ಶಸ್ತ್ರಗಳು, ಕುದುರೆ, ಆನೆಗಳನ್ನು ಗುರುಗಳಿಗೆ ಕಾಣಿಕೆ ನೀಡುವಂತೆ ಪ್ರೋತ್ಸಾಹಿಸಲಾಯಿತು.

ಅದೊಂದು ದಿನ ಅಂದರೆ 1699ರ ವೈಶಾಖ ಪಾಡ್ಯದ ದಿನ. ಆನಂದಪುರದಲ್ಲಿ ದೂರದೂರದಿಂದ ಶಿಷ್ಯರು ಗುರು ಗೋವಿಂದ ಸಿಂಹನ ದರ್ಶನಕ್ಕಾಗಿ ಬಂದಿದ್ದರು. ಇದ್ದಕ್ಕಿದ್ದಂತೆ ಗುರು ರುದ್ರರೂಪ ತಾಳಿ ನಿಂತ. ಕತ್ತಿಯನ್ನು ಝಳಪಿಸುತ್ತಾ, “ಧರ್ಮಕ್ಕಾಗಿ ತಲೆಯನ್ನು ಕೊಡಲು ನಿಮ್ಮ ಪೈಕಿ ಯಾರು ಸಿದ್ಧರಿದ್ದೀರಿ? ನನ್ನ ಕತ್ತಿ ತವಕಿಸುತ್ತಿದೆ” ಎಂದು ಗರ್ಜಿಸಿದ.

ಕ್ಷಣಕಾಲ ಇಡೀ ಸಭೆಯಲ್ಲಿ ಸಿಡಿಲು ಬಿದ್ದಂತಾಯಿತು. ಅನಂತರ ಲಾಹೋರಿನ ದಯಾರಾಮ ಎಂಬ ಸಿಖ್ಖನು ಮುಂದೆ ಬಂದು ಕೈಜೋಡಿಸಿ, ತಲೆಬಾಗಿ ನಿಂತ. “ನನ್ನ ಈ ತಲೆ ಎಂದೆಂದಿಗೂ ನಿಮ್ಮದೇ. ತಾವು ಅದನ್ನು ಸ್ವೀಕರಿಸಿದಲ್ಲಿ ನನ್ನ ಬದುಕು ಬಂಗಾರವಾದಂತೆ” ಎಂದ.

ಗುರು ಅವನನ್ನು ತನ್ನ ಡೇರೆಯೊಳಕ್ಕೆ ಕರೆದೊಯ್ದ. ’ಕಚ್’ ಎಂದು ಕತ್ತರಿಸಿದ ಸದ್ದಾಯಿತು. ಡೇರೆಯಿಂದ ರಕ್ತದ ಕೋಡಿ ಹರಕ್ಕೆ ಹರಿಯಿತು. ರಕ್ತ ತೊಟ್ಟಿಕ್ಕುತ್ತಿದ್ದ ಕತ್ತಿ ಮೇಲೆತ್ತಿ ಮುಂಚಿಗಿಂತ ಉಗ್ರರೂಪದಲ್ಲಿ ಗುರು ಹೊರಗೆ ಬಂದ. “ನನಗೆ ಇನ್ನೊಂದು ತಲೆ ಬೇಕಾಗಿದೆ” ಎಂದು ಕೂಗಿದ.

ಆಗ ದೆಹಲಿಯ ಧರ್ಮದಾಸನೆಂಬ ಇನ್ನೊಬ್ಬ ಶಿಷ್ಯ ಮುಂದೆ ಬಂದ. ಅವನನ್ನೂ ಅದೇ ರೀತಿ ಗುರು ಕರೆದೊಯ್ದ. ಒಳಗಿನಿಂದ ಪುನಃ ಕತ್ತರಿಸಿದ ಸದ್ದು. ಮತ್ತೆ ಹೊರಗೆ ಬಂದ ಗುರುವಿನಿಂದ ಅದೇ ರೀತಿಯ ಕರೆ.

ಈ ಭಯಂಕರ ದೃಶ್ಯವನ್ನು ನೋಡಲಾರದೆ ಕೆಲವರು ಎದೆ ನಡುಗಿ ಓಡಿದರು. ಗುರುವಿನ ತಲೆಕೆಟ್ಟಿದೆಯೆಂದು ಕೆಲವರು ಹೋಗಿ ಗುರುವಿನ ತಾಯಿಗೆ ದೂರು ಕೊಟ್ಟರು. ಆದರೆ ಗುರು ಆದಾವುದನ್ನೂ ಲೆಕ್ಕಿಸಲಿಲ್ಲ.

ಅದೇ ರೀತಿ ಇನ್ನೂ ಮೂರು ಸಲ ಕರೆಕೊಟ್ಟ. ಆಗಲೂ ಪ್ರತಿಬಾರಿಗೂ ಒಬ್ಬೊಬ್ಬ ಮುಂದೆ ಬಂದ. ದ್ವಾರಕೆಯ ಮೊಹಕಂಚಂದ್, ಬಿದರೆಯ ಸಾಹಿಬ್‌ಚಂದ್, ಜಗನ್ನಾಥ ಪುರಿಯ ಹಿಮ್ಮತ್ ಇವರೇ ಆ ಮೂವರು.

ಅನಂತರ ಗುರು ಗೋವಿಂದಸಿಂಹನು ಶಾಂತನಾದ. ಡೇರೆಯೊಳಕ್ಕೆ ಹೋಗಿ ಆ ಐದು ಶಿಷ್ಯರನ್ನು ಸೈನಿಕ ಸಮವಸ್ತ್ರದಲ್ಲಿ ಹೊರತಂದ! ಒಬ್ಬೊಬ್ಬನನ್ನು ಒಳಗಡೆ ಕರೆದೊಯ್ದಾಗಲೂ ಅವರು ಬಲಿಕೊಟ್ಟದ್ದು ಒಂದೊಂದು ಮೇಕೆಯನ್ನು! ಆ ಐದು ಜನರನ್ನು ಐವರು ಪ್ರಾಣಪ್ರಿಯರು ಎಂದು ಕರೆದು, ಅವರನ್ನು ತನ್ನ ಸೇನಾಪತಿಗಳನ್ನಾಗಿ ನೇಮಿಸಿದ. ಎಲ್ಲರೂ ಕೂಡಿ ಆಕಾಶ ಬಿರಿಯುವಂತೆ ’ಸತ್ ಶ್ರೀ ಆಕಾಲ್’ ಎಂದು ದೇವರ ಜಯಘೋಷ ಮಾಡಿದರು.

ಅದೇ ದಿನವೇ 20 ಸಾವಿರ ಸ್ತ್ರೀ ಪುರುಷರು ಖಾಲಸಾ ಪಂಥದ ದೀಕ್ಷೆ ಪಡೆದರು. ಎಲ್ಲೆಡೆ ಖಾಲಸಾ ಪಂಥ ಹರಡಲಿ, ಸಂಪೂರ್ಣ ಜಗತ್ತನಲ್ಲಿ ಹಿಂದು ಧರ್ಮದ ಪ್ರಭಾವ ಬೆಳೆಯಲಿ ಎಂಬುದು ಅವರ ಆಶಯವಾಗಿತ್ತು.

‘ಗಿಣಿಗಳಿಂದ ಗಿಡುಗಗಳನ್ನು ಸೋಲಿಸುವೆ, ನನ್ನ ಒಬ್ಬೊಬ್ಬ ಸೈನಿಕನು ಶತ್ರುಗಳ ಲಕ್ಷ ಸೈನಿಕರೊಂದಿಗೆ ಹೋರಾಡುವಂತೆ ಮಾಡುವೆ, ಆಗಲೇ ನನ್ನ ಹೆಸರು ಗುರು ಗೋವಿಂದಸಿಂಹ ಎಂಬುದು ನಿಜವಾದಂತೆ’ ಎಂದು ಸಾರಿದರು. ಗುರು ಗೋವಿಂದಸಿಂಹರು ಕೆಲವೇ ದಿನಗಳಲ್ಲಿ ಸ್ವಾಭಿಮಾನ ಸಂಪನ್ನ, ಪರಾಕ್ರಮಭರಿತ ಯೋಧರ ಪಡೆ ಕಟ್ಟಿದರು.

ಸಮಾಜದಲ್ಲಿ ಧರ್ಮಾಭಿಮಾನ ತುಂಬಿದರು.ಗುರುಗಳ ಕೀರ್ತಿ ವಿಸ್ತರಿಸಲಾರಂಭಿಸಿತು. ಗುರು ಗೋವಿಂದಸಿಂಹರನ್ನು ನಾಶಗೊಳಿಸಲು ಔರಂಗಜೇಬನು ಕಳಿಸಿದ ಪೈಂದೇಖಾನ್ ಮತ್ತು ದಿನ್ ಬೇಗ್ ನೇತೃತ್ವದ 20 ಸಾವಿರ ಸೈನ್ಯವು ಸಿಖ್ ಸೈನಿಕರ ಶೌರ‌್ಯ, ಪರಾಕ್ರಮಗಳಿಗೆ ಸೋತು ಓಡಿದ್ದು ಮಾತ್ರವಲ್ಲದೇ ಗುರುಗಳ ಬಾಣಕ್ಕೆ ಪೈಂದೇಖಾನನು ಪ್ರಾಣ ಕಳೆದುಕೊಳ್ಳಬೇಕಾಯಿತು.

ಕ್ರುದ್ಧನಾದ ಔರಂಗಜೇಬನು ಲಾಹೋರಗಳಲ್ಲಿದ್ದ ತನ್ನ ಸಮಸ್ತ ಸೈನ್ಯವನ್ನು ವಜೀರಖಾನನ ಮಹಾದಂಡನಾಯಕತ್ವದಲ್ಲಿ ಆನಂದಪುರಕ್ಕೆ ಮುತ್ತಿಗೆ ಹಾಕುವಂತೆ ಆಜ್ಞಾಪಿಸಿದನು. ಗುರುಗಳ ಸಾಧನೆ ಸಹಿಸದ ಕೆಲವು ಹಿಂದು ರಾಜರೂ ಜೊತೆಗೂಡಿದರು.

ಒಂದಕ್ಕೆ ಹತ್ತುಪಟ್ಟು ಹೆಚ್ಚಾಗಿದ್ದ ಶತ್ರು ಸೈನ್ಯದೊಂದಿಗೆ ಗುರು ಗೋವಿಂದಸಿಂಹರ ಸೈನಿಕರು ವೀರಾವೇಶದಿಂದ ಹೋರಾಡಿದರು, ಶತ್ರು ಸೈನ್ಯಕ್ಕೆ ಭಾರಿ ಹಾನಿಯುಂಟು ಮಾಡಿದರು. ದಿನಗಳೆದಂತೆ ಆಹಾರ ಸಾಮಗ್ರಿ, ನೀರು ಮುಗಿಯುತ್ತ ಬಂದರೂ ಶತ್ರುಗಳಿಗೆ ಶರಣಾಗಲಿಲ್ಲ.

ವಜೀರ್ ಖಾನನು ಸಂಧಿ ಪತ್ರ ಕಳಿಸಿ ಗುರುಗಳು ಪರಿವಾರ ಸಮೇತವಾಗಿ ಆನಂದಪುರ ಬಿಟ್ಟರೆ ಯುದ್ಧ ವಿರಾಮ ಮಾಡುವೆನೆಂದು ಮಾತು ಕೊಟ್ಟ. ವ್ಯರ್ಥವಾಗಿ ಪ್ರಾಣ ಕಳೆದುಕೊಳ್ಳುವುದಕ್ಕಿಂತ ಬದುಕಿದ್ದು ಮತ್ತೆ ಹೋರಾಡಿ ಗೆಲ್ಲುವುದು ಉತ್ತಮವೆಂಬ ನಿರ್ಧಾರಕ್ಕೆ ಬಂದ ಗುರುಗಳು ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ತಾಯಿ ಗುಜರಿಬಾಯಿಯೊಂದಿಗೆ ಗುಟ್ಟಾಗಿ ಸಿರ್ಸಾ ಊರಿಗೆ ಕಳಿಸಿದರು. 500 ನಂಬಿಕಸ್ತ ಸೈನಿಕರು ಹಾಗೂ ಇಬ್ಬರು ಹಿರಿಯ ಮಕ್ಕಳೊಂದಿಗೆ ಕೋಟೆಯಿಂದ ಹೊರಬಿದ್ದರು.

ಮಾತಿಗೆ ತಪ್ಪಿದ ವಜೀರಖಾನನು ಮೊಗಲ್ ಸೈನ್ಯವು ಗುರುಗಳನ್ನು ಬೆನ್ನಟ್ಟುವಂತೆ ಆಜ್ಞಾಪಿಸಿದನು. ಚಮಕೋರನಲ್ಲಿ ಭೀಕರ ಕಾಳಗ ನಡೆದು ಗುರು ಗೋವಿಂದಸಿಂಹರ ಪುತ್ರರಾದ ಅಜಿತ್‌ಸಿಂಹ ಮತು ಜುಜಾರ್‌ಸಿಂಹರು ಪರಾಕ್ರಮದಿಂದ ಹೋರಾಡಿ ವೀರ ಮರಣವನ್ನಪ್ಪಿದರು.

ತನ್ನ ಸ್ವಂತ ಮಕ್ಕಳು ಈ ರೀತಿ ಹತರಾಗಿದ್ದನ್ನು ಕಂಡ ಗುರುಗಳು ದೇವರಿಗೆ ಕೈಜೋಡಿಸಿ ದೇವರೇ, ನಿನ್ನದೇ ವಸ್ತುವನ್ನು ನಿನಗೆ ಅರ್ಪಿಸುತ್ತಿದ್ದೇನೆ ಎಂದರು.

ಅಳಿದುಳಿದ ಐವರು ಶಿಷ್ಯರೊಂದಿಗೆ ಮೊಗಲ್ ಸೈನ್ಯದ ಮೇಲೇರಿ ಹೋಗಲು ಸಿದ್ಧರಾದ ಗುರು ಗೋವಿಂದಸಿಂಹರನ್ನು ಅವರ ಶಿಷ್ಯರು ಒತ್ತಾಯಪೂರ್ವಕವಾಗಿ ಅಲ್ಲಿಂದ ಕಳಿಸಿದರು. ತಲೆ ಮರೆಸಿಕೊಂಡು ದಕ್ಷಿಣಕ್ಕೆ ಆಗಮಿಸಿದ ಗುರು ಗೋವಿಂದಸಿಂಹರು ನಾಂದೇಡನ್ನು ಪ್ರವೇಶಿಸಿದರು.

ಸೇವಕನ ಮೋಸದಿಂದ ಸೆರೆಸಿಕ್ಕ ಗುರುಗಳ ಮಕ್ಕಳನ್ನು ವಜೀರಖಾನನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಸೆ, ಭಯ ತೋರಿಸಿ ಒತ್ತಾಯಿಸಿದನು. ಅಜ್ಜಿಯ ಪ್ರೇರಣೆಯಿಂದಾಗಿ 9 ಹಾಗೂ 11 ವರ್ಷದ ಫತೇಸಿಂಗ್, ಜೋರಾವರ್‌ಸಿಂಗರು ‘ನಾವು ಗುರು ಗೋವಿಂದರ ಮಕ್ಕಳು.

ಪ್ರಾಣ ಕೊಟ್ಟೇವು, ಧರ್ಮ ಬಿಡೆವು’ ಎಂದರು. ಆ ಹಸುಳೆಗಳನ್ನು ಸುತ್ತಲೂ ಗೋಡೆಕಟ್ಟಿ ಜೀವಂತ ಸಮಾಧಿ ಮಾಡಲಾಯಿತು. ಪ್ರಾಣಪಕ್ಷಿ ಹಾರಿಹೋದ ಮೇಲೆ ಈರ್ವರನ್ನೂ ತುಂಡರಿಸಿಹಾಕಿದ್ದು ಮಾತ್ರವಲ್ಲದೇ ತಾಯಿ ಗುಜರಿಬಾಯಿಯನ್ನು ಕೋಟೆಯ ಮೇಲಿಂದ ತಳ್ಳಿ ಸಾಯಿಸಲಾಯಿತು.

ಈ ದುಃಖದ ವಾರ್ತೆಯಿಂದಲೂ ವಿಚಲಿತರಾಗದ ಗುರು ಗೋವಿಂದಸಿಂಹರು, ‘ಈ ಮಕ್ಕಳೂ ಸಹ ನಿನ್ನವೇ, ನಿನಗೇ ಅವನ್ನು ಅರ್ಪಿಸುವೆ’ ಎಂದರು. ಅನಂತರ ತನ್ನ ಚೂರಿಯಿಂದ ಒಂದು ಮುಳ್ಳು ಗಿಡವನ್ನು ಬುಡಸಹಿತ ಕತ್ತರಿಸಿ ಈ ಮುಳ್ಳು ಗಿಡದಂತಯೇ ಈ ರಾಕ್ಷಸೀ ಸಾಮ್ರಾಜ್ಯವೂ ಬುಡಸಹಿತ ನಾಶವಾಗುವುದು ನಿಶ್ಚಿತ ಎಂದರು.

ನಾಂದೇಡದಲ್ಲಿ ಮಾಧವದಾಸ್ ಬೈರಾಗಿಯ ಆಶ್ರಮಕ್ಕೆ ತೆರಳಿ ಆತನಿಗೆ ಕರ್ತವ್ಯದ ಬೋಧನೆ ಮಾಡಿದರು. ‘ಕಾಡಿನಲ್ಲಿ ಕುಳಿತು ತಪಸ್ಸು ಮಾಡುವ ಕಾಲ ಇದಲ್ಲ, ದೇಶ ಧರ್ಮಗಳ ರಕ್ಷಣೆಗಾಗಿ ಕ್ರಿಯಾಶೀಲನಾಗು, ನಾನು ಪ್ರಾರಂಭಿಸಿದ ಸ್ವಾತಂತ್ರ್ಯ ಹೋರಾಟದ ಸೇನಾನಿಯಾಗಿ ಶತ್ರುಗಳನ್ನು ಧ್ವಂಸ ಮಾಡು, ಸ್ವರಾಜ್ಯ ಕಟ್ಟು’ ಎಂದು ಆಶೀರ್ವದಿಸಿದರು.

ಆತನೆ ಮುಂದೆ ಬಂದಾ ವೀರ ಬೈರಾಗಿಯಾಗಿ ಪ್ರಸಿದ್ಧನಾದನು. ಗುರುಗಳ ಆಣತಿಯಂತೆ ಪಂಜಾಬನ್ನು ಸೇರಿ ಗುರುಗೋವಿಂದಸಿಂಹರ ಶಿಷ್ಯರ ಸಹಾಯದೊಂದಿಗೆ ವಿಜಯಶಾಲಿಯಾಗಿ, ಸರಹಿಂದ್‌ನ ನವಾಬ ವಜೀರಖಾನನನ್ನು ಕೊಂದು ಸ್ವತಂತ್ರ ಹಿಂದು ಸಾಮ್ರಾಜ್ಯವನ್ನು ಕಟ್ಟಿದನು. ಮುಂದೆ ಮಹಾರಾಜ ರಣಜಿತ್‌ಸಿಂಗ್ ನೇತೃತ್ವದಲ್ಲಿ ಸಂಪೂರ್ಣ ಉತ್ತರ ಭಾರತವು ಇಸ್ಲಾಂ ರಾಕ್ಷಸಿ ಆಕ್ರಮಣದಿಂದ ಮುಕ್ತವಾಯಿತು.

ಕೇವಲ 42 ವರ್ಷಗಳ ತಮ್ಮ ಜೀವನ ಯಾತ್ರೆಯಲ್ಲಿ ಗುರು ಗೋವಿಂದಸಿಂಹರು ಸಂಪೂರ್ಣ ಸಮಾಜವನ್ನು ಸ್ವಾಭಿಮಾನ ಹಾಗೂ ಪರಾಕ್ರಮಗಳಿಂದ ತುಂಬಿ ಮೊಗಲ್ ಸಾಮ್ರಾಜ್ಯದ ಪತನಕ್ಕೆ ಕಾರಣಕರ್ತರಾದರು.

ಅವರಿಂದಾಗಿ ಮೊಗಲ ಸಾಮ್ರಾಜ್ಯವು ನುಚ್ಚು ನೂರಾಯಿತು, ಶೌರ‌್ಯಯುಗವು ಮತ್ತೆ ಪ್ರಾರಂಭವಾಯಿತು. ತಂದೆ, ತಾಯಿಯವರಿಂದ ಮೊದಲ್ಗೊಂಡು ಮಕ್ಕಳ ಸಹಿತವಾಗಿ ಧರ್ಮ ರಕ್ಷಣೆಯ ಪವಿತ್ರಾಗ್ನಿಯಲ್ಲಿ ಹವಿಸ್ಸಾಗಿ ತಮ್ಮನ್ನು ಅರ್ಪಿಸಿಕೊಂಡರು.

ಶ್ರೀಕೃಷ್ಣ ಪರಮಾತ್ಮನು ಆಧರ್ಮದ ಅಟ್ಟಹಾಸ ಹೆಚ್ಚಾದಾಗ ತಾನು ಅವತರಿಸಿ ಬಂದು ಧರ್ಮವನ್ನು ಕಾಪಾಡುತ್ತಾನೆ ಎಂಬುದಕ್ಕೆ ಗುರುಗೋವಿಂದ ಸಿಂಗರೇ ಸಾಕ್ಷಿಯಾದರು.

ಆ ಮಹಾಪುರುಷ ಮತ್ತೊಮ್ಮೆ ಹುಟ್ಟಿಬಂದು ಅಧರ್ಮವನ್ನು ಬುಡ ಸಮೇತ ಕಿತ್ತು ಹಾಕಲಿ.

— Nationalist Mahi

 •  
  1.4K
  Shares
 • 1.4K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com