Connect with us
Loading...
Loading...

ಅಂಕಣ

ಸ್ವತಂತ್ರ ಭಾರತದ ಮೊದಲ ಪ್ರಧಾನಿ ನೆಹರು ಅಲ್ಲ ಸುಭಾಷ್ ಚಂದ್ರ ಬೋಸ್!! ಹೇಗೆ?

Published

on

 • 16.7K
 •  
 •  
 •  
 •  
 •  
 •  
 •  
  16.7K
  Shares

ನಿಮಗೆ ಗೊತ್ತೇ? ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ದೇಶದ ಪ್ರಥಮ ಪ್ರಧಾನ ಮಂತ್ರಿ.

ಇಲ್ಲಿದೆ ಪೂರ್ಣ ಮಾಹಿತಿ…

ಅರೆರೆರೆ! ಇದೇನಿದು? ಭಾರತ ದೇಶದ ಪ್ರಥಮ ಪ್ರಧಾನಿ ಚಾಚಾ ನೆಹರೂ ಅಂತ ಚಿಕ್ಕ ವಯಸ್ಸಿನಿಂದ ಉರು ಹೊಡೆದಿದ್ದೆವಲ್ಲ. ಇದೇನಿದು ಹೊಸ ಸಂಗತಿ? ಅನ್ಕೊತಿದೀರಾ? ಹಾಗೇನೂ ಇಲ್ಲ. ಇದು ಹೊಸ ಸಂಗತಿಯೇನು ಅಲ್ಲ. ಇತಿಹಾಸದಲ್ಲಿ ಹುದುಗಿ ಹೋಗಿರುವ ಕಟು ಸತ್ಯ. ಕೆಲವು ಸ್ವಾರ್ಥಿಗಳು ಉದ್ದೇಶಪೂರ್ವಕವಾಗಿ ತೆರೆಮರೆಗೆ ಸರಿಸಿದ ಕಹಿ ಸತ್ಯ. ಇಂದು ಆ ಗ್ರಹಣ ಹಿಡಿದಿದ್ದ ಸತ್ಯಕ್ಕೆ ವಿಮೋಚನೆ ಸಿಗುತ್ತಿದೆ ಅಷ್ಟೇ!

ನಮಗೆಲ್ಲಾ ತಿಳಿದಿರುವಂತೆ 1940 ರ ಆಸುಪಾಸಿನಲ್ಲಿ ಗಾಂಧೀಜಿಯವರ ಶಾಂತಿಪೂರ್ವಕ ಯೋಜನೆಗಳಲ್ಲಿ ವಿಶ್ವಾಸ ಕಳೆದುಕೊಂಡ ನೇತಾಜಿ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯಿತ್ತು ಹೊರನಡೆದರು.

ಬ್ರಿಟಿಷರು ಅವರನ್ನು ಅಪಾಯಕಾರಿ ಮನುಷ್ಯನೆಂದು ಗುರುತಿಸಿ ಸೆರೆಯಲ್ಲಿ ಇಟ್ಟರು. 1941ರ ಜನವರಿ ವೇಳೆ ಪವಾಡದಂತೆ ರಾತ್ರೋರಾತ್ರಿ ಗೃಹಬಂಧನದಿಂದ ತಪ್ಪಿಸಿಕೊಂಡ ಸುಭಾಷ್ ವಿವಿಧ ಮಾರುವೇಷಗಳನ್ನು ಧರಿಸಿ ಬ್ರಿಟೀಷರಿಗೆ ಚಳ್ಳೆ ಹಣ್ಣು ತಿನ್ನಿಸಿ, ಅಫ್ಘಾನಿಸ್ತಾನ ಮಾರ್ಗದಲ್ಲಿ ದೂರದ ರಷ್ಯಾ, ಯೂರೋಪ್ ವರೆಗೂ ಸಂಚರಿಸಿದರು. ಬ್ರಿಟಿಷರ ಶತ್ರುಗಳಾದ ಹಿಟ್ಲರ್ ಮತ್ತು ಮುಸಲೋನಿ ಸೇರಿದಂತೆ ಅನೇಕ ನಾಯಕರನ್ನು ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸೈನಿಕ ಸಹಾಯ ಮಾಡುವಂತೆ ಮನವಿ ಮಾಡಿದರು.

ಆದರೆ ದೂರದ ಜರ್ಮನಿ ಮತ್ತು ಯೂರೋಪಿನ ಇತರ ದೇಶಗಳಿಗಿಂತ ಹತ್ತಿರದ ಜಪಾನಿನ ಮೂಲಕ ಸೈನಿಕ ಆಕ್ರಮಣ ಸುಲಭವೆಂದು ತಿಳಿದುಬಂದುದರಿಂದ, ಜರ್ಮನಿ, ಇಟಲಿ ಮುಂತಾದ ಯೂರೋಪಿಯನ್ ದೇಶಗಳಿಂದ ಪರೋಕ್ಷ ಸಹಾಯದ ಭರವಸೆಯನ್ನು ಪಡೆದು, ಜರ್ಮನಿಯಿಂದ ಸಬ್ ಮೆರಿನ್ ಮೂಲಕ 1943 ರಲ್ಲಿ ಸಿಂಗಪುರ, ಜಪಾನ್ ತಲುಪಿದರು. ಬ್ರಿಟನ್ನಿನ ವಿರೋಧಿಯಾಗಿದ್ದ ಜಪಾನ್ ನ ಪ್ರಧಾನಿ ತೋಜೋ ಸುಭಾಷರ ವ್ಯಕ್ತಿತ್ವಕ್ಕೆ ಮಾರುಹೋಗಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ನೀಡಿದರು.

ಎರಡನೇ ಮಹಾಯುದ್ಧದ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಬ್ರಿಟಿಷರ ವಿರುದ್ಧ ಜಪಾನ್ ಮತ್ತು ಅದರ ಮಿತ್ರ ರಾಷ್ಟ್ರಗಳ ಸಹಕಾರದಿಂದ ಮಿಲಿಟರಿ ಆಕ್ರಮಣ ಮಾಡಿದರೆ ಬ್ರಿಟಿಷರನ್ನು ಭಾರತದಿಂದ ಹೊಡೆದು ಓಡಿಸಬಹುದು ಎಂದು ಲೆಕ್ಕಾಚಾರ ಹಾಕಿದ ಸುಭಾಷ್ ಸೈನ್ಯವನ್ನು ಕಟ್ಟಲು ಬಯಸಿದರು. ಅದಕ್ಕೆ ಪೂರಕವಾಗಿ ಅದಾಗಲೇ ಪೂರ್ವ ಏಷ್ಯಾ ದೇಶಗಳಲ್ಲಿ ನಿರಂತರ ಸಂಘಟನೆ ಮಾಡುತ್ತಾ ಸೈನ್ಯವೊಂದನ್ನು ಕಟ್ಟಿದ್ದ ರಾಸ್ ಬಿಹಾರಿ ಬೋಸ್ ರವರು ತಮ್ಮ ನಂತರ ಸುಭಾಷರೇ ಈ ಸೈನ್ಯಕ್ಕೆ ಸಮರ್ಥ ನೇತೃತ್ವ ವಹಿಸಬಲ್ಲ ನಾಯಕ‌ ಎಂಬುದನ್ನು ಮನಗಂಡು ಸೈನ್ಯದ ನೇತೃತ್ವವನ್ನು ಸುಭಾಷ್ ಚಂದ್ರ ಬೋಸರಿಗೆ ಹಸ್ತಾಂತರಿಸಿದರು.

ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಲು ಬಂದು ಜಪಾನಿನ ಕೈಲಿ ಪರಾಭವ ಹೊಂದಿದ ಕಾರಣದಿಂದಾಗಿ ಯುದ್ಧಕೈದಿಗಳಾಗಿ ಜಪಾನ್ ದೇಶದ ಕೈಲಿ ಸೆರೆಯಲ್ಲಿದ್ದ ಭಾರತೀಯ ಸೈನಿಕರನ್ನು ಸೆರೆಯಿಂದ ಬಿಡಿಸಿದ ಸುಭಾಷರು ತಮ್ಮ ನಿಷ್ಠೆಯನ್ನು ಬ್ರಿಟಿಷರ ಮೇಲಿಂದ ಕಿತ್ತು ತೆಗೆಯುವಂತೆ ಆ ಸೈನಿಕರಿಗೆ ಪ್ರೇರಣೆ ನೀಡುತ್ತಾರೆ. ಅದರಲ್ಲಿ ಯಶ ಸಾಧಿಸಿದ ಅವರು 1943 ರಲ್ಲಿ ಆಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿ (ಐ ಎನ್ ಎ) ಯ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಳ್ಳುತ್ತಾರೆ. ಸೈನಿಕರು ಸುಭಾಷರ ವಿರೋಚಿತ ಮಾತುಗಳಿಂದ ಸ್ಫೂರ್ತಿಗೊಂಡು ತಮ್ಮ ನಿಷ್ಠೆಯನ್ನು ಸುಭಾಷರಿಗೆ ಘೋಷಿಸುತ್ತಾರೆ. ಭಾರತದ ಸ್ವಾತಂತ್ರ್ಯಪ್ರಾಪ್ತಿಗಾಗಿ ಹೋರಾಡಲು ನೇತಾಜಿಯವರ ಆದೇಶವನ್ನು ಪಾಲಿಸಲು ಕಟಿಬದ್ಧರಾಗುತ್ತಾರೆ.

ಇದಾದ ನಂತರ ಸುಭಾಷ್ ಚಂದ್ರ ಬೋಸರು ಜಪಾನಿ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಸ್ವತಂತ್ರ ಭಾರತದ ಹಂಗಾಮಿ ಸರ್ಕಾರವೊಂದರ ಸ್ಥಾಪನೆಯ ನಿರ್ಧಾರ ಕೈಗೊಳ್ಳುತ್ತಾರೆ. ದಿನಾಂಕ 21 ಅಕ್ಟೋಬರ್ 1943 ರಂದು ಸಿಂಗಪುರದಲ್ಲಿ ಸ್ವತಂತ್ರ ಭಾರತದ ಸರ್ಕಾರ ರಚನೆಯಾಗಲು ವೇದಿಕೆ ಸಿದ್ಧವಾಗುತ್ತದೆ. ಸುಭಾಷ್ ಚಂದ್ರ ಬೋಸರು ಆ ಸರ್ಕಾರದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸುಭಾಷರೊಂದಿಗೆ ಸಚಿವ ಸಂಪುಟದ ಸದಸ್ಯರೂ ಸಹಾ ಪ್ರಮಾಣ ವಚನ ಸ್ವೀಕರಿಸಿ ಸುಭಾಷರಿಗೆ ತಮ್ಮ ನಿಷ್ಠೆಯನ್ನು ಘೋಷಿಸುತ್ತಾರೆ.

ರಾಸ್ ಬಿಹಾರಿ ಬೋಸರು ಸರ್ಕಾರದ ಸರ್ವೋಚ್ಛ ಸಲಹೆಗಾರರಾಗಿಯೂ, ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ಮಹಿಳಾ ಸಂಘಟನಾ ಮಂತ್ರಿಯಾಗಿಯೂ, ಲೆಫ್ಟಿನೆಂಟ್ ಕರ್ನಲ್ ಚಟರ್ಜಿರವರು ವಿತ್ತ ಸಚಿವರಾಗಿಯೂ, ಮಾಹಿತಿ ಹಾಗೂ ಪ್ರಚಾರ ಖಾತೆ ಸಚಿವರಾಗಿ ಎಸ್. ಎ. ಅಯ್ಯರ್ ರವರೂ, ಸರ್ಕಾರದ ಕಾರ್ಯದರ್ಶಿಯಾಗಿ ಸಹಾಯ್ ರವರೂ, ಕಾನೂನು ಸಲಹೆಗಾರರಾಗಿ ಎ. ಎನ್. ಸರ್ಕಾರ್ ರವರೂ, ಸೇನೆಯ ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರುಗಳೂ ಅಂದು ಸುಭಾಷರೊಂದಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ‌. ಯುದ್ಧ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಸುಭಾಷರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ.

ಪೂರ್ವ ಏಷ್ಯಾದಲ್ಲಿ ನೆಲೆಸಿದ್ದ ಇಪ್ಪತ್ತು ಲಕ್ಷ ಜನ ಭಾರತೀಯರು ಮತ್ತು 50,000 ಕ್ಕೂ ಹೆಚ್ಚು ಆಜಾದ್ ಹಿಂದ್ ಫೌಜ್ ನ ಸೈನಿಕರು ಸುಭಾಷರನ್ನು ತಮ್ಮ ನಾಯಕನೆಂದು ಸ್ವೀಕರಿಸುತ್ತಾರೆ. ಹೊಸ ಸರ್ಕಾರಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸುತ್ತಾರೆ. ಜನರು ದೇಶದ ಪೂರ್ಣ ಸ್ವಾತಂತ್ರ್ಯಕ್ಕಾಗಿ ತನು ಮನ ಧನಗಳನ್ನು ಅರ್ಪಿಸಲು ಸಿದ್ಧರಾದರೆ, ಸೈನಿಕರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಯುದ್ಧದಲ್ಲಿ ಪ್ರಾಣ ಕೊಡಲು ಸಿದ್ಧವಿರುವುದಾಗಿ ಪ್ರಮಾಣ ಮಾಡುತ್ತಾರೆ.

ಅಜಾದ್ ಹಿಂದ್ ಸರ್ಕಾರ ರಚನೆಯಾದ ಕೇವಲ ಎರಡೇ ದಿನಗಳಲ್ಲಿ ಜಪಾನ್ ಆ ಸರ್ಕಾರಕ್ಕೆ ಮಾನ್ಯತೆ ನೀಡಿತು. ಕೂಡಲೇ ಜಪಾನ್ ಸೇರಿದಂತೆ ಬರ್ಮಾ, ಜರ್ಮನಿ, ಕ್ರೋಷಿಯಾ, ಫಿಲಿಫೈನ್ಸ್, ನಾನ್ ಕಿಂಗ್, ಚೀನಾ, ಸಯಾಂ, ಇಟಲಿ, ಮಾಂಚುಕುವೋನಂಥಾ ಒಂಭತ್ತು ರಾಷ್ಟ್ರಗಳು ಆಜಾದ್ ಹಿಂದ್ ಸರ್ಕಾರವನ್ನು ಭಾರತ ಸರ್ಕಾರವೆಂದು ಸುಭಾಷರನ್ನು ಭಾರತದ ಪ್ರಧಾನ ಮಂತ್ರಿಯೆಂದು ಮಾನ್ಯತೆ ನೀಡಿದವು.

ಸುಭಾಷರು ಸಿಂಗಪುರದ ಕೆಥೆ ಥಿಯೇಟರ್ ನಲ್ಲಿ ಕಿಕ್ಕಿರಿದು ಸೇರಿದ್ದ ಜನ ಸಮೂಹದ ನಡುವೆ ಕಿವಿಗಡಚಿಕ್ಕುವ ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ನಡುವೆ ಅಂದು ಪ್ರಮಾಣ ವಚನ ಸ್ವೀಕರಿಸಿದ್ದು ಹೀಗೆ..

“ಸುಭಾಷ್ ಚಂದ್ರ ಬೋಸ್ ಎಂಬ ಹೆಸರಿನ ನಾನು ಈಶ್ವರನ ಮೇಲೆ ಆಣೆ ಮಾಡುತ್ತಾ ಶಪಥ ಮಾಡುತ್ತೇನೆ. ಹಿಂದುಸ್ಥಾನ ಮತ್ತು ನನ್ನ ಮೂವತ್ತೆಂಟು ಕೋಟಿ ದೇಶಬಾಂಧವರನ್ನು ದಾಸ್ಯದಿಂದ ಮುಕ್ತಗೊಳಿಸುವುದಕ್ಕಾಗಿ ನನ್ನ ಜೀವನದ ಕೊನೆಯ ಕ್ಷಣದವರೆಗೆ ಸ್ವಾತಂತ್ರ್ಯ ಯುದ್ಧದ ಪುಣ್ಯಜ್ವಾಲೆಯನ್ನು ಪ್ರಜ್ವಲಿಸುತ್ತೇನೆ. ಹಿಂದುಸ್ಥಾನದ ಸೇವಕನಾಗಿ ನನ್ನ ದೇಶಬಾಂಧವರಾದ ಬಂಧು ಭಗಿನಿಯರ ಸೇವೆ ಮಾಡುವುದು ನನ್ನ ಪರಮ ಕರ್ತವ್ಯವೆಂದು ಭಾವಿಸುತ್ತೇನೆ. ಸ್ವಾತಂತ್ರ್ಯ ದೊರೆತ ನಂತರ ದೇಶದ ರಕ್ಷಣೆಗಾಗಿ ನನ್ನ ರಕ್ತದ ಪ್ರತಿ ಹನಿಯನ್ನು ಅರ್ಪಿಸುತ್ತೇನೆ.”

ನೇತಾಜಿ ಸುಭಾಷ್ ಚಂದ್ರ ಬೋಸರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವಾಗ ವಾತಾವರಣ ತೀವ್ರ ಭಾವೋತ್ಕರ್ಷದಿಂದ ಕೂಡಿತ್ತು. ದೇಶ ವಿದೇಶಗಳ ಅನೇಕ ಗಣ್ಯರೂ, ಪ್ರತಿನಿಧಿಗಳು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು‌. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಎದ್ದು ನಿಂತು ಒಟ್ಟಾಗಿ ರಾಷ್ಟ್ರಗೀತೆ ಹಾಡಿದರು. ಭಾರತದಲ್ಲಿ ವಾಸಿಸುತ್ತಿದ್ದ ಜನಸಾಮಾನ್ಯರ ಮೇಲೂ ಸಿಂಗಪುರದಲ್ಲಿ ನಡೆದ ಈ ಘಟನೆ ಅತ್ಯಂತ ಮಹತ್ವದ ಪರಿಣಾಮ‌ ಬೀರಿತು. ಸುಭಾಷರ ದನಿಯನ್ನು ರೇಡಿಯೋದಲ್ಲಿ ಕೇಳಿದ ಜನ ಭಾರತವನ್ನು ಬ್ರಿಟೀಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ನೇತಾಜಿ ಬಂದೇ ಬರುವರೆಂದು ನಂಬಿದರು. ನೇತಾಜಿಯವರ ಪ್ರತಿ ನಡೆ ಪ್ರತಿ ನುಡಿಯೂ ಅವರಿಗೆ ರೋಮಾಂಚನವನ್ನುಂಟು ಮಾಡುತ್ತಿತ್ತು.

ಸುಭಾಷರು ಹೆಸರಿಗೆ ಮಾತ್ರ ಒಂದು ಸರ್ಕಾರ ರಚಿಸಿ ಸುಮ್ಮನೆ ಕೈ ಕಟ್ಟಿ ಕೂರಲಿಲ್ಲ. ಒಂದು ದೇಶಕ್ಕೆ ಮತ್ತು ಜವಾಬ್ದಾರಿಯುತ ಸರ್ಕಾರಕ್ಕೆ ಇರಬೇಕಾದ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಭಾಷೆಯನ್ನು ನಿರ್ಧರಿಸಿದರು. ರಾಷ್ಟ್ರೀಯ ಸೈನ್ಯವನ್ನು ಕಟ್ಟಿ ನೋಟುಗಳು, ಅಂಚೆಚೀಟಿಗಳು, ಬ್ಯಾಂಕುಗಳು ಎಲ್ಲವನ್ನು ಆರಂಭಿಸಿದರು. ವಿವಿಧ ದೇಶಗಳಿಗೆ ರಾಯಭಾರಿಗಳು, ಕಛೇರಿಗಳು, ವಶಪಡಿಸಿಕೊಂಡ ರಾಜ್ಯಗಳಿಗೆ ರಾಜ್ಯಪಾಲರು, ಆಡಳಿತ ಪ್ರತಿನಿಧಿಗಳು, ಸೈನ್ಯಾಧಿಕಾರಿಗಳು, ಕಮಿಷನರುಗಳು, ಎಲ್ಲರನ್ನೂ ನೇಮಿಸಿದರು.

ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸುಭಾಷರು ಕೇವಲ ಎರಡೇ ದಿನಗಳಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕಾ ದೇಶಗಳ ಮೇಲೆ ಯುದ್ಧ ಘೋಷಿಸಿದರು. ಜಪಾನಿನ ವಶದಲ್ಲಿದ್ದ ಅಂಡಾಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಭಾರತ ಸರ್ಕಾರದ ಅಧೀನಕ್ಕೆ ತೆಗೆದುಕೊಂಡು ಶಹಿದ್ ಮತ್ತು ಸ್ವರಾಜ್ ಎಂದು ಹೆಸರಿಟ್ಟು ಆ ದ್ವೀಪಗಳಿಗೆ ಕಮಿಷನರುಗಳನ್ನು ನೇಮಕ ಮಾಡಿದರು. ಸ್ವತಂತ್ರ ಭಾರತದ ಸರ್ಕಾರಕ್ಕೆ ಜಪಾನಿನಿಂದ ಮಿತ್ರ ರಾಷ್ಟ್ರವೆಂಬ ಮಾನ್ಯತೆ ಪಡೆದುಕೊಂಡರು.

ಜಪಾನಿ ಸೈನ್ಯದ ಸಹಕಾರದೊಂದಿಗೆ “ಚಲೋ ದಿಲ್ಲಿ” ಘೋಷಣೆ ಮಾಡಿ, ಬರ್ಮಾ ಮೂಲಕ ಭಾರತದ ಗಡಿಯೊಳಕ್ಕೆ ನುಗ್ಗುತ್ತಾರೆ. ಮಣಿಪುರ ಇಂಫಾಲ್ ಗಳನ್ನು ವಶಪಡಿಸಿಕೊಂಡ ಐ ಎನ್ ಎ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರ ಗೀತೆಯನ್ನು ಹಾಡಿ ಮಾತೃಭೂಮಿಯ ಭೂಭಾಗವನ್ನು ವಿಮೋಚನೆಗೊಳಿಸಿತು. ಸುಭಾಷರು ಯುದ್ಧಭೂಮಿಯ ಮುಂಚೂಣಿಯಲ್ಲಿ ನಿಂತು ಸೈನಿಕರನ್ನು ಹುರಿದುಂಬಿಸಿ ನಮ್ಮ ಪಾಲಿಗೆ ಅಸಾಧ್ಯವೆನಿಸಿದ್ದ ಜಯವನ್ನು ತಮ್ಮ ಪಾಲಿನದನ್ನಾಗಿಸಿಕೊಂಡರು.

ಆದರೆ ಈ ಸಂತಸ ಬಹಳ ದಿನ ಉಳಿಯಲಿಲ್ಲ. 1945 ರಲ್ಲಿ ಜಪಾನ್ ಮೇಲೆ ಅಮೇರಿಕಾ ಸುರಿಸಿದ ಅಣುಬಾಂಬುಗಳಿಂದ ಜಪಾನ್ ಸೋತು ಶರಣಾಯಿತು. ಜಪಾನ್ ಶರಣಾದರೂ ಐ ಎನ್ ಎ ಮಾತ್ರ ತನ್ನ ಹೋರಾಟವನ್ನು ನಿಲ್ಲಿಸಲಿಲ್ಲ. ಆದರೆ ಈಶಾನ್ಯ ರಾಜ್ಯಗಳಲ್ಲಿ ಆರಂಭಗೊಂಡ ಭೀಕರ ಮಳೆ ಹಾಗೂ ಮಲೇರಿಯಾ ರೋಗಗಳು ಐ ಎನ್ ಎ ಯ ಸೈನಿಕರನ್ನು ಬಲಿ ತೆಗೆದುಕೊಳ್ಳಲು ಆರಂಭಿಸಿತು. ಸಾಲದ್ದಕ್ಕೆ ಆಹಾರ ಪೂರೈಕೆ ಸಂಪರ್ಕ ಕೈಕೊಟ್ಟು ಹಸಿವಿನಿಂದ ಪ್ರಾಣ ಬಿಡುವಂಥಾ ಸ್ಥಿತಿ ನಿರ್ಮಾಣಗೊಂಡಿತು‌.

1945 ರ ಮೇ ವೇಳೆಗೆ ಐ.ಎನ್.ಎ. ಯುದ್ಧದಿಂದ ಹಿಂದೆ ಸರಿಯುವಂತೆ ಭಾರತದ ಪ್ರಧಾನಿ ಹಾಗೂ ಸೈನ್ಯದ ಕಮಾಂಡರ್ ಇನ್ ಚೀಫ್ ಸಹಾ ಆಗಿದ್ದ ಸುಭಾಷರು ಕರೆನೀಡಿದರು. ಅಳಿದುಳಿದ ಸೈನಿಕರನ್ನು ರಕ್ಷಿಸಿದ ಬಳಿಕವೇ ಸುಭಾಷ್ ರಣರಂಗದಿಂದ ಹಿಂದಿರುಗುವ ನಿರ್ಧಾರ ಮಾಡಿದರು. ಸುಭಾಷರು ಆಗಸ್ಟ್ 18 ರಂದು ಜಪಾನಿ ಸೇನೆಯ ಲಘು ವಿಮಾನವೊಂದರಲ್ಲಿ ಮುಂದಿನ ಪ್ರಯಾಣಕ್ಕೆ ಸಜ್ಜಾದರು. ಅದೇ ಕೊನೆ ಮತ್ತೆ ನೇತಾಜಿಯವರು ಯಾರ ಕಣ್ಣಿಗೂ ಕಾಣದೇ ನಾಪತ್ತೆಯಾದರು. ಬೋಸರು ವಿಮಾನ ಅಪಘಾತದಲ್ಲಿ ಮೃತರಾದರೆಂಬ ಸುದ್ದಿ ಹರಡಿತು. ಆದರೆ ಜನರು ಈ ಸುದ್ದಿಯನ್ನು ನಂಬಲಿಲ್ಲ. ಸೂಕ್ತ ಸಾಕ್ಷ್ಯಾಧಾರಗಳು ಇಂದಿಗೂ ಲಭ್ಯವಿಲ್ಲ.

ಸುಭಾಷರು ಅಸೀಮ ಸಾಹಸದಿಂದ ಆರಂಭಿಸಿದ ಐ.ಎನ್.ಎ ಹೋರಾಟ ಅಂದೇ ಅಂತ್ಯಗೊಂಡಿತಾದರೂ ಅಂದು ಸುಭಾಷರು ಹಚ್ಚಿದ ಕ್ರಾಂತಿಜ್ಯೋತಿ ಮಾತ್ರ ಅಲ್ಲಿಗೆ ಆರದೇ ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯರು ಬ್ರಿಟಿಷರ ವಿರುದ್ಧವೇ ಬಂಡಾಯ ಏಳುವಂತೆ ಪ್ರಚೋದನೆ ಮಾಡಿತು. 1946 ರ ಫೆಬ್ರವರಿ ಸುಮಾರಿಗೆ ರಾಯಲ್ ಇಂಡಿಯನ್ ನೇವಿಯಲ್ಲಿ ಸುಭಾಷ್ ಮತ್ತು ಐ.ಎನ್.ಎ. ಹೆಸರಿನಲ್ಲಿ ಬಂಡಾಯ ಆರಂಭವಾಯಿತು. ಐ.ಎನ್.ಎ. ನಾಯಕರಿಗೆ ಗಲ್ಲು ಶಿಕ್ಷೆ ಘೋಷಿಸಿದ್ದನ್ನು ವಿರೋಧಿಸಿ ಸೈನಿಕರು ದಂಗೆ ಏದ್ದರು. ಉಪಹಾರವನ್ನು ತಿರಸ್ಕರಿಸಿದರು. ಸಮವಸ್ತ್ರ ಕಿತ್ತೊಗೆದರು. ಬ್ರಿಟೀಷರ ಧ್ವಜವಾದ ಯೂನಿಯನ್ ಜಾಕ್ ಅನ್ನು ಕಿತ್ತೊಗೆದು ನೌಕೆಗಳ ಮೇಲೆ ತ್ರಿವರ್ಣ ಧ್ವಜ ವನ್ನು ಹಾರಿಸಿ, ನೇತಾಜಿ ಭಾವಚಿತ್ರಗಳನ್ನು ತಮ್ಮ ತಮ್ಮ ನೌಕೆಯೊಳಗೆ ಸ್ಥಾಪಿಸಿ, ಕ್ವಿಟ್ ಇಂಡಿಯಾ ಮತ್ತು ಜೈ ಹಿಂದ್ ಘೋಷಣೆ ಕೂಗಲಾರಂಭಿಸಿದರು.

ಎಲ್ಲೆಡೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ದೇಶದ ಹತ್ತಾರು ಪ್ರಮುಖ ನೌಕಾ ನೆಲೆಗಳಿಗೆ ಬಂಡಾಯದ ಬೆಂಕಿ ತಗುಲಿತ್ತು. 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸೈನಿಕ ದಂಗೆಯ ದುಸ್ವಪ್ನವನ್ನು ಸ್ಮರಿಸಿಕೊಂಡ ಇಂಗ್ಲೆಂಡ್ ಮುಂದಾಗಲಿರುವ ಭಾರೀ ಪ್ರಮಾಣದ ಅನಾಹುತವನ್ನು ಮನಗಂಡು ಭಾರತಕ್ಕೆ ಸ್ವಾತಂತ್ರ್ಯ ಘೋಷಿಸಿ ಇಲ್ಲಿಂದ ಕಾಲ್ತೆಗೆಯಿತು. ಗಾಂಧಿಯವರ ಭಾರತ ಬಿಟ್ಟು ತೊಲಗಿ ಆಂದೋಲನಕ್ಕಿಂತಲೂ ಸುಭಾಷರ ಐ ಎನ್ ಎ ಪ್ರೇರಿತ ಸೈನಿಕ ಬಂಡಾಯವೇ ಭಾರತದ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಮಾಣದ ಕಾರಣವಾಯಿತು ಎಂದು ಅನೇಕ ಬ್ರಿಟನ್ ರಾಜಕಾರಣಿಗಳು ಮತ್ತು ಸೇನಾನಾಯಕರು ಒಪ್ಪಿಕೊಂಡರು.

ಆದರೆ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಬಂದ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ನೇತಾಜಿ ಮತ್ತು ಐ.ಎನ್.ಎ. ಯನ್ನು ತಮಗೆ ಪ್ರತಿಸ್ಪರ್ಧಿಗಳೆಂದು ಬಗೆದು ಇತಿಹಾಸದ ಪುಟಗಳಿಂದ ಅದನ್ನು ಕಣ್ಮರೆಗೊಳಿಸುವ ಕೆಲಸವನ್ನು ವ್ಯವಸ್ಥಿತವಾಗಿ ಆರಂಭಿಸಿತು. ಹೀಗಾಗಿಯೇ ಇಂದು ಮೇಲೆ ಹೇಳಿದ ಅಷ್ಟೂ ವಿಷಯಗಳು ನಮ್ಮ‌ ಜನರಿಗೆ ಹೊಸಸಂಗತಿಯೆಂಬಂತೆ ಭಾಸವಾಗುತ್ತಿದೆ. ಆದರೆ ಸತ್ಯವನ್ನು ಹೆಚ್ಚು ದಿನಗಳ ಕಾಲ ಮುಚ್ಚಿಡಲು ಆಗುವುದಿಲ್ಲವಲ್ಲ. ಒಂದಲ್ಲ ಒಂದು ದಿನ ಹೊರಗೆ ಬರಲೇಬೇಕು. ಸುಭಾಷರು ಭಾರತ ದೇಶದ ಪ್ರ‌ಥಮ ಪ್ರಧಾನಿ ಎಂಬ ಸತ್ಯವು ಇಂದಲ್ಲ ನಾಳೆ ಜನಮಾನಸಕ್ಕೆ ತಲುಪಿಯೇ ತಲುಪುತ್ತದೆ. ಅದೆಷ್ಟೇ ವಿರೋಧಗಳು ಬಂದರೂ, ಅಡ್ಡಿ ಆತಂಕಗಳು ಎದುರಾದರೂ ಮುಂದೊಂದು ದಿನ ನೇತಾಜಿಯವರೇ ಈ ದೇಶದ ಪ್ರಥಮ ಪ್ರಧಾನಿ ಎಂಬ ಸತ್ಯವನ್ನು ಪ್ರಪಂಚ ಒಪ್ಪಿಯೇ ಒಪ್ಪುತ್ತದೆ.

ಆತ್ಮೀಯ ದೇಶಭಕ್ತ ಬಂಧುಗಳೇ, ಬನ್ನಿ ಇನ್ನಾದರೂ ನೇತಾಜಿ ಎಂಬ ಪೂರ್ಣ ಚಂದ್ರನ ಮೇಲೆ ಕವಿದಿರುವ ಈ ಗ್ರಹಣದ ನೆರಳನ್ನು ಸರಿಸಿ ಚಂದ್ರಗ್ರಹಣ ವಿಮೋಚನೆ ಮಾಡೋಣ. ನೇತಾಜಿ ಭಾರತದ ಪ್ರಥಮ ಪ್ರಧಾನಿ ಎಂಬ ಈ ಸತ್ಯವನ್ನು ಜಗತ್ತಿಗೆ ಸಾರಿ ಸಾರಿ ಹೇಳೋಣ. ಪಠ್ಯಪುಸ್ತಕಗಳಲ್ಲಿ ಭಾರತದ ಪ್ರಥಮ ಪ್ರಧಾನಿ ಎಂದು ಯಾರ ಹೆಸರನ್ನಾದರೂ ಮುದ್ರಿಸಿಕೊಳ್ಳಲಿ, ಆದರೆ ನಮ್ಮ ಬಾಯಲ್ಲಿ ಬರುವುದು ಮಾತ್ರ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದೇ! ಅಂದು ಇಂದು ಎಂದೆಂದೂ!

ಜೈ ಹಿಂದ್!
ಜೈ ಭಾರತ ಮಾತಾ!
ವಂದೇ ಮಾತರಂ!

#ವಿಮೋಚನಂ
#ಚಂದ್ರಗ್ರಹಣವಿಮೋಚನೆ
#NetajiTheFirstPrimeMinisterOfIndia
#ವಿವೇಕಶಿಕ್ಷಣವಾಹಿನಿ

 •  
  16.7K
  Shares
 • 16.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com