Connect with us
Loading...
Loading...

ಇತಿಹಾಸ

ನಾನು ಹುಟ್ಟಿದ ದಿನವೇ ಭಾರತದ ಸ್ವಾತಂತ್ರ್ಯೋತ್ಸವ, ನಾನು ಮರಣವನ್ನಪ್ಪಿದ ದಿನವೇ ಭಾರತದ ಗಣರಾಜ್ಯೋತ್ಸವ!!

Published

on

 • 2.7K
 •  
 •  
 •  
 •  
 •  
 •  
 •  
  2.7K
  Shares

1857ರ ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ಮುನ್ನ ಕರ್ನಾಟಕ ರಾಜ್ಯದ ಕಿತ್ತೂರಿನಲ್ಲಿ ಸುಮಾರು 30 ವರ್ಷಗಳ ಮುನ್ನವೇ ಹೋರಾಟದ ಪ್ರಥಮ ಸ್ವಾತಂತ್ರ ಜ್ಯೋತಿ ಬೆಳಗಿತ್ತು. ಕಿತ್ತೂರು ರಾಣಿ ಚೆನ್ನಮ್ಮಳ ಅಂಗರಕ್ಷಕ ಪಡೆಯ ದೇಶಪ್ರೇಮಿಗಳ ಹೋರಾಟದ ಸ್ವರೂಪ ಮತ್ತು ಅವರ ಬದ್ಧತೆ ಮುಂದಿನ ದಿನಗಳಲ್ಲಿ ಸ್ವಾತಂತ್ರ ಚಳವಳಿಗೆ ಬುನಾದಿಯಾಯಿತು.

ಕರ್ನಾಟಕದಲ್ಲಿ ಕ್ರಾಂತಿಕಾರಿ ಚಳವಳಿಯ ಚರಿತ್ರೆ ಆರಂಭವಾಗುವುದೇ ಸಂಗೊಳ್ಳಿ ರಾಯಣ್ಣನಿಂದ. 1931ರಲ್ಲಿ ಭಗತ್ ಸಿಂಗ್ ಮತ್ತು ಇತರರನ್ನು ಅಂದಿನ ಬ್ರಿಟಿಷ್ ಸರಕಾರ ಗಲ್ಲಿಗೇರಿಸುವ ನೂರು ವರ್ಷಗಳ ಮೊದಲೇ ಸ್ವಾತಂತ್ರದ ಹೋರಾಟಕ್ಕಾಗಿ ಸಂಗೊಳ್ಳಿ ರಾಯಣ್ಣ ನೇಣುಗಂಬವನ್ನೇರಿದ್ದರು.

ಸಂಗೊಳ್ಳಿ ರಾಯಣ್ಣನೂ ಒಬ್ಬ, ಅಪ್ರತಿಮ ದೇಶಭಕ್ತ. ವಿಶೇಷ ಅಂದರೆ ರಾಯಣ್ಣನ ಜನ್ಮದಿನಾಂಕ ಅಗಸ್ಟ್ 15 ಅಂದೇ ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲ್ಪಡುತ್ತಿದೆ. ಅದೇ ರೀತಿ, ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ ದಿನ ಜನವರಿ 26ರಂದು ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿದೆ.

ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಕರುನಾಡಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

ಮಲಪ್ರಭೆಯ ಮಡಿಲಲ್ಲಿರುವ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ರಾಯಣ್ಣನ ಹುಟ್ಟೂರು. ಮೂಲ ಹೆಸರು ರಾಯಪ್ಪ. ಪೂರ್ಣ ಹೆಸರು ರಾಯಣ್ಣ ಭರಮಣ್ಣ ರೋಗಣ್ಣವರ(ಕೆಂಚವ್ವನ ಮಗ). ಈ ದಂಪತಿಗೆ ಮೂವರು ಗಂಡು ಮಕ್ಕಳು. ಕೊನೆಯ ಮಗನೇ ರಾಯಣ್ಣ. ಈತ ಹುಟ್ಟಿದ್ದು 1798ರಲ್ಲಿ. ಹುಟ್ಟೂರಲ್ಲೇ ಬೆಳೆದ ರಾಯಣ್ಣ ಗೆರಿಲ್ಲಾ ಯುದ್ಧ ಪರಿಣತಿ ಹೊಂದಿದ್ದ.

ಕಿತ್ತೂರು ಚೆನ್ನಮ್ಮ ಕಟ್ಟಿದ್ದ ಸೇನೆಯ ಅಧಿಪತಿಯಾಗಿದ್ದ. ರಾಯಣ್ಣನ ಒಂದು ಗುಟುರಿಗೆ ದೇಶಭಕ್ತರ ಒಂದು ದಂಡೇ ಯುದ್ಧಕ್ಕೆ ಸನ್ನದ್ಧವಾಗಿ ನಿಲ್ಲುತ್ತಿತ್ತು. ಕೇವಲ 32 ವರ್ಷಗಳ ಕಾಲ ಬದುಕಿದ ವೀರಾಧಿವೀರನ ಹೋರಾಟದ ಮತ್ತು ದುರಂತ ಕಥೆ ಎಂಥವರನ್ನೂ ಕಿಚ್ಚಿನಿಂದ ರೊಚ್ಚಿಗೇಳುವಂತೆ ಮಾಡುತ್ತದೆ.

ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಸಮರ ಸಾರಿದ. ಸಾಮ್ರಾಜ್ಯಷಾಹಿ ಬ್ರಿಟಿಷರು ಬಡವರಿಂದ ದೋಚಿದ್ದ ಅಪಾರ ಸಂಪತ್ತನ್ನು ಕಸಿದುಕೊಂಡಿದ್ದು ಮಾತ್ರವಲ್ಲದೇ, ಸರ್ಕಾರಕ್ಕೆ ಸೇರಿದ್ದ ಹತ್ತು ಹಲವು ಕಡತಗಳು, ಮಹತ್ವದ ದಾಖಲೆಗಳನ್ನು ಸುಟ್ಟು ಕರಕಲು ಮಾಡಿದ.

ಬಡಜನರನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷ್ ಸರ್ಕಾರಕ್ಕೆ ಅಪಾರ ಹಾನಿ ಮಾಡುವ ಜತೆಗೆ, ಸಿಂಹಸ್ಪಪ್ನವಾಗಿ ಕಾಡಿದ್ದ. ಅಕ್ಷರಶಃ ಕ್ರಾಂತಿಕಾರಿ ಎನಿಸಿಕೊಂಡಿದ್ದ. ಕಿತ್ತೂರು ಸಾಮ್ರಾಜ್ಯ ಎಲ್ಲ ಪ್ರಾಂತ್ಯಗಳಿಗಿಂತ ಶ್ರೀಮಂತವಾಗಿತ್ತು.

ಆ ಆಸ್ಥಾನದಲ್ಲಿದ್ದು ಬಂಗಾರ, ದವಸ ಧಾನ್ಯಗಳು ಇರುವುದು ಬ್ರಿಟಿಷರ ಕಣ್ಣಿಗೆ ಬಿತ್ತು. ಇಂತಹ ರಾಜ್ಯವನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಅನೇಕ ತಂತ್ರಗಳನ್ನು ಹೂಡಿ ಅಂತಿಮವಾಗಿ ಹೋರಾಟಕ್ಕೆ ದುಮುಕಿದರು.

ಚೆನ್ನಮ್ಮಳ ಆದೇಶದಂತೆ ರಾಯಣ್ಣ ಸಂಗೊಳ್ಳಿಯಿಂದ ಅನೇಕ ಯುವಕರನ್ನು ಸೈನ್ಯಕ್ಕೆ ಸೇರಿಸಿಕೊಂಡ. ಅಕ್ಟೋಬರ್ 21, 1824ರಂದು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸೈನ್ಯದೊಂದಿಗೆ ಕಿತ್ತೂರಿಗೆ ಲಗ್ಗೆ ಹಾಕಿದ. ರಾಣಿ ಚೆನ್ನಮ್ಮ ಇವನನ್ನು ಕೋಟೆ ಒಳಗೆ ಬಿಡಲಿಲ್ಲ.

ಇದರಿಂದ ಅವಮಾನಗೊಂಡ ಇವನು ಮತ್ತೆ ಮತ್ತಷ್ಟು ಸೈನ್ಯದೊಂದಿಗೆ ಕೋಟೆಯನ್ನು ಮುತ್ತಿಗೆ ಹಾಕಿದ. ರಾಯಣ್ಣ ಗುಂಪು ಇಂತಹ ಅವಕಾಶಕ್ಕಾಗಿ ಕಾಯುತ್ತಿತ್ತು. ಅಂತಿಮವಾಗಿ ಬ್ರಿಟಿಷ್ ಅಧಿಕಾರಿಯನ್ನು ಕೊಂದು ವಿಜಯ ಪತಾಕೆಯನ್ನು ಹಾರಿಸಿದರು.

ಈ ಯುದ್ಧ ಪರಿಣಾಮ ಆರಂಭದಲ್ಲಿ ಕಿತ್ತೂರಿನಲ್ಲಿ ಸಂಭ್ರಮ ನೆಲೆಸಿತ್ತಾದರೂ, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಕ್ಕೆ ಸಂಬಂಧಿಸಿದ ಹಲವು ಮುನ್ಸೂಚನೆಗಳು ಸಿಕ್ಕಿದ್ದವು.

ಈ ಸೋಲಿನಿಂದ ಮುಖಭಂಗಕ್ಕೊಳಗಾದ ಬ್ರಿಟಿಷರಲ್ಲಿ ಕಿತ್ತೂರಿನ ಬಗೆಗೆ ಅಸಮಾಧಾನ, ಆಕ್ರೋಶ ಹೆಚ್ಚಾಯಿತು. ಕಿತ್ತೂರಿನ ಸೇನೆಯನ್ನು ನೇರ ಸೋಲಿಸಲಾಗದು ಎಂಬುದನ್ನು ಮನಗಂಡ ಬ್ರಿಟಿಷರು, ಹತ್ತಾರು ಆಸೆ-ಆಮಿಷಗಳನ್ನು ತೋರಿಸಿ, ಕಿತ್ತೂರಿನ ಅರಮನೆಯ ಪ್ರಮುಖರನ್ನು ಬುಟ್ಟಿಗೆ ಬೀಳಿಸಿಕೊಂಡರು.

ಮೋಸದಿಂದ ಚನ್ನಮ್ಮನನ್ನು ಬೆನ್ನಟ್ಟಿ ಬಂಧಿಸಿದರು. ಆದರೆ, ಆ ಸಂದರ್ಭದಲ್ಲಿ ರಾಯಣ್ಣ ಬ್ರಿಟಿಷರಿಂದ ತಪ್ಪಿಸಿಕೊಂಡಿದ್ದ. ಚೆನ್ನಮ್ಮಳನ್ನು ಕಾಪಾಡಬೇಕೆಂದು ಹೊರಟ ರಾಯಣ್ಣನ ಸಂಗಡಿಗರನ್ನು ಬ್ರಿಟಿಷರ ಸೈನ್ಯ ಬಂಧಿಸಿ, ಧಾರವಾಡದ ಸೆರೆಮನೆಗೆ ತಳ್ಳಿತು.

ಅಂತಿಮವಾಗಿ ತಮ್ಮದೇನಿದ್ದರೂ ರಾಜ ಮನೆತನದ ಮೇಲೆ ದ್ವೇಷವೇ ಹೊರತು ಜನಸಾಮಾನ್ಯರ ಮೇಲಲ್ಲ ಎಂಬ ಕಾರಣಕ್ಕಾಗಿ ರಾಜಮನೆತನದವರನ್ನು ಹೊರತುಪಡಿಸಿ ಎಲ್ಲರನ್ನೂ ಜೈಲಿನಿಂದ ಬಿಡುಗಡೆಗೊಳಿಸಿದರು

ರಾಯಣ್ಣನಿಗೆ ಹೇಗಾದರೂ ಮಾಡಿ ಮತ್ತೆ ಕಿತ್ತೂರನ್ನು ಬ್ರಿಟಿಷರಿಂದ ವಶಪಡಿಸಿಕೊಂಡು ರಾಣಿ ಚೆನ್ನಮ್ಮಳನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿ ಕೊಡಬೇಕೆಂಬ ಮಹಾನ್ ಉದ್ದೇಶದಿಂದ ಮತ್ತಷ್ಟು ಜನರನ್ನು ಸಂಘಟಿಸಿ, ಸೈನ್ಯವನ್ನು ಕಟ್ಟುವಂತಹ ಕೆಲಸಕ್ಕೆ ಕೈಯಿಟ್ಟ.

ಇವುಗಳಿಗೆ ಬೇಕಾದ ಸಂಪನ್ಮೂಲವನ್ನು ಕ್ರೋಡೀಕರಿಸುವ ಸಾಹಸದ ಕೆಲಸಕ್ಕೆ ಕೈಯಿಟ್ಟ. ಸಂಗೊಳ್ಳಿಗೆ ಹೋದಂತಹ ರಾಯಣ್ಣ ಇನ್ನೂ ಯುವಕನಾಗಿದ್ದ್ದ ಕಾರಣ ಹೋರಾಟ ಮಾಡಲು ಛಲ ಉತ್ಸಾಹವಿತ್ತು.

ತನ್ನ ಎಲ್ಲ ಹೋರಾಟಕ್ಕೆ ಹಣದ ಆವಶ್ಯಕತೆ ಇತ್ತು. ಇದಕ್ಕಾಗಿ ಇವನು ಬಿಚ್ಚುಗತ್ತಿ ಚನ್ನಬಸವಣ್ಣ, ಗುರಿಕಾರ ಬಾಳಣ್ಣ, ವಡ್ಡರ ಯಲ್ಲಣ್ಣ ಅವರೊಡನೆ ಚರ್ಚಿಸಿದ. ಯಲ್ಲಣ್ಣ ಇದರಲ್ಲಿ ಬುದ್ಧಿವಂತನಾಗಿದ್ದ.

ಭರಮಣ್ಣ ನಿರ್ವಹಿಸುತ್ತಿದ್ದ ತಳವಾರಿಕೆಯ ಕೆಲಸವನ್ನು ಇಷ್ಟವಿಲ್ಲದಿದ್ದರೂ ಮಾಡುವಂತೆ ರಾಯಣ್ಣನಿಗೆ ಪ್ರೇರೇಪಿಸಿದ. ಇದರಿಂದಾಗಿ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಸ್ನೇಹಿತರ ಅಭಿಲಾಷೆಯಾಗಿತ್ತು.

ರಾಯಣ್ಣನಿಗೆ ಕಿತ್ತೂರನ್ನು ದಾಸ್ಯದಿಂದ ಬಿಡುಗಡೆಗೊಳಿಸುವ ಚಿಂತೆಯೊಂದು ಕಾಡುತ್ತಿತ್ತು. ಇದಕ್ಕಾಗಿ ಗುಪ್ತ ಸಂಘಟನೆಯ ಚಟುವಟಿಕೆಯನ್ನು ಮಾಡಲು ಆರಂಭಿಸಿದ.

ಹೇಗಾದರೂ ಮಾಡಿ ಸೆರೆಮನೆಯಲ್ಲಿರುವ ರಾಣಿಯನ್ನು ಭೇಟಿ ಮಾಡಿ ತಮ್ಮ ಕ್ರಾಂತಿಯ ವಿಷಯವನ್ನು ತಿಳಿಸಿ ಕಿತ್ತೂರು ಚೆನ್ನಮ್ಮಳ ಆಶೀರ್ವಾದವನ್ನು ಪಡೆಯಬೇಕೆಂದು ನಿರ್ಧರಿಸಿ ಜಂಗಮನ ವೇಷದಲ್ಲಿ ಭೇಟಿಯನ್ನು ಮಾಡಿದ.

ಮೊದಲು ಇವನು ಯಾರು ಎಂದು ಅರಿವಾಗದೇ, ಇವನು ನಿಜವಾದ ಜಂಗಮನೆಂದು ರಾಣಿ ಅಂದುಕೊಂಡಳು. ಆದರೆ, ನಂತರ ಇವನು ರಾಯಣ್ಣನೆಂದು ತಿಳಿದು ಸಂತಸಗೊಂಡಳು. ನಾನು ಮತ್ತೆ ಕಿತ್ತೂರನ್ನು ನಿಮ್ಮ ವಶಕ್ಕೆ ತಂದುಕೊಡುವುದಾಗಿ ಪ್ರತಿಜ್ಞೆಯನ್ನು ಮಾಡಿದ.

ಇದರಿಂದ ಆನಂದಗೊಂಡ ಚೆನ್ನಮ್ಮ ಕ್ರಾಂತಿಯ ಚಟುವಟಿಕೆಗಳಿಗೆ ತನ್ನಲ್ಲಿದ್ದ ಎಲ್ಲ ಒಡವೆಗಳನ್ನು ಇವನ ಕೈಗೆ ನೀಡಿ ಗೆದ್ದು ಬರುವಂತೆ ಆಶೀರ್ವಾದ ಮಾಡಿದಳು.

ಬ್ರಿಟಿಷರ ವಿರುದ್ಧದ ಹೋರಾಟವನ್ನು ರಾಯಣ್ಣ ಮುಂದುವರಿಸಿದ. ಸಂಗ್ರಾಮದ ನೊಗ ಹೊತ್ತ ಚನ್ನಮ್ಮನ ಬಲಗೈ ಬಂಟನನ್ನು ಬಲೆಗೆ ಬೀಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಅವಶ್ಯವಿರುವ ಎಲ್ಲ ತಂತ್ರಗಳನ್ನು ರೂಪಿಸಿತ್ತು.

ಆದರೆ, ಆರಂಭಿಕ ಹಂತದ ಯಾವ ಪ್ರಯತ್ನವೂ ಫಲಪ್ರದವಾಗಲಿಲ್ಲ. ಆಗ ಬ್ರಿಟಿಷರ ನೆರವಿಗೆ ಬಂದದ್ದು ರಾಯಣ್ಣನ ಮಾವ. ಸ್ವತಃ ಮಾವನಿಂದಲೇ ಮೋಸಕ್ಕೊಳಗಾದ ರಾಯಣ್ಣ ಬ್ರಿಟಿಷರ ಬಲೆಗೆ ಬಿದ್ದ.

ಗಲ್ಲಿಗೇರಿಸುವ ಮೊದಲು, ‘ನಿನ್ನ ಕೊನೆ ಆಸೆ ಏನು’ ಎಂದು ಬ್ರಿಟಿಷರು ರಾಯಣ್ಣನನ್ನು ಕೇಳಿದ್ದರು.

ಅದಕ್ಕೆ ರಾಯಣ್ಣನು, ‘ನಮ್ಮ ದೇಶದಲ್ಲಿ ಮನೆ, ಮನೆಗೊಬ್ಬರಂತೆ ಸಾವಿರಾರು ದೇಶಭಕ್ತರು ಹುಟ್ಟಿಬರುತ್ತಾರೆ. ನಿಮ್ಮನ್ನು ಈ ದೇಶದಿಂದ ಒದ್ದೋಡಿಸುತ್ತಾರೆ ನೋಡಿ’ ಎಂದು ಹೇಳಿ ಎಚ್ಚರಿಸಿದ್ದು ಈಗ ಇತಿಹಾಸ.

1831ರ ಜ.26ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಆತನನ್ನು ಗಲ್ಲಿಗೇರಿಸಲಾಯಿತು

ಬದುಕಿನ ಪ್ರತಿಯೊಂದು ಕ್ಷಣವನ್ನು ಕಿತ್ತೂರು ರಾಣಿ ಚೆನ್ನಮ್ಮನವರ ಹಿತಕ್ಕಾಗಿ, ಆ ಸಂಸ್ಥಾನದ ಸ್ವಾಭಿಮಾನವನ್ನು ಕಾಯುವ ಸಲುವಾಗಿ ಹೋರಾಟ ನಡೆಸಿದ ಕ್ರಾಂತಿಕಾರಿ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಬದುಕು ಕನ್ನಡ ನಾಡಿನ ಜನತೆಗೆ ಸ್ಫೂರ್ತಿದಾಯಕ.

– Nationalist Mahi

 •  
  2.7K
  Shares
 • 2.7K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com