Connect with us
Loading...
Loading...

ಇತಿಹಾಸ

ಕರ್ನಾಟಕ್ಕೂ ಶ್ರೀರಾಮ, ರಾಮೇಶ್ವರ ನಿಗೂ ಸಂಬಂಧವಿದೆಯೆ? ಹೌದು ಎನ್ನುತ್ತೆ ಉತ್ಖನನವಾದ ಈ ಶಾಸನ!!! ಏನಿದೆ ಈ ಶಾಸನದಲ್ಲಿ?

Published

on

 • 2
 •  
 •  
 •  
 •  
 •  
 •  
 •  
  2
  Shares

ಸಗರಾದ್ರಿ ಬೆಟ್ಟದಲ್ಲಿ 11ನೇ ಶತಮಾನದ ಕನ್ನಡ ಶಿಲಾಶಾಸನ ಶೋಧ!!

ಯಾದಗಿರಿಃ ಕನ್ನಡ ಸಂಸ್ಕತಿ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಹಾಗೂ ಸಹಾಯಕ ಖಜಾನಾಧಿಕಾರಿ ಹಾಗೂ ಸಂಶೋಧಕ ಡಾ.ಎಂ.ಎಸ್.ಸಿರವಾಳ ಅವರು ಇತ್ತೀಚೆಗೆ ಶಾಸನ ಸಂಶೋಧನೆಗಾಗಿ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ಜಿಲ್ಲೆಯ ಶಹಾಪುರದ ಸಗರಾದ್ರಿ ಬೆಟ್ಟದಲ್ಲಿ ಸುಮಾರು ಸಾವಿರ ವರ್ಷಗಳಿಗೂ ಅಧಿಕ ಪುರಾತನವಾದ ಕನ್ನಡ ಶಿಲಾಶಾಸನ ಒಂದನ್ನು ಶೋಧಿಸಿದ್ದು, ಅದರ ಆಳವಾದ ಅಧ್ಯಯನ ನಡೆಸಿದ ಅವರು, ಶಾಸನದ ಸಮಗ್ರ ವಿವರಗಳನ್ನು ಈ ರೀತಿಯಾಗಿ ನೀಡಿದ್ದಾರೆ.

ಶಾಸನ ಶೋಧ ಮಾಡಿದ ನಿವೇಶನಃ ಶಹಾಪುರದ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವದ ಸಗರಾದ್ರಿ ಬೆಟ್ಟದ ಕೋಟೆಯ ಹಿಂಬದಿಯಲ್ಲಿರುವ ಭೀಮರಾಯ ರಾಕಂಗೇರಿಯವರ ಹೊಲದಲ್ಲಿರುವ ದೊಡ್ಡ ಗುಂಡಿನ ಮೇಲೆ ಈ ಶಿಲಾಶಾಸನ ಪತ್ತೆ ಮಾಡಿದ್ದಾರೆ.
ಶಾಸನದ ಸ್ವರೂಪಃ ಸಗರಾದ್ರಿ ಬೆಟ್ಟದಲ್ಲಿ ದಕ್ಷಿಣ ದಿಕ್ಕಿಗೆ ದೊಡ್ಡ ಕೆಂಪು ಗ್ರಾನೈಟ್ ಒರಟು ಕಲ್ಲಿನ ಮೇಲೆ 4 ಅಡಿ ಉದ್ದ ಮತ್ತು 3 ಅಡಿ ಅಗಲ ಗಾತ್ರದಲ್ಲಿ ಈ ಶಿಲಾಶಾಸನವನ್ನು ಕೊರೆಯಲಾಗಿದೆ.

ಶಾಸನದ ಲಿಪಿ ಮತ್ತು ಭಾಷೆಃ ಭಾರತದ ಪ್ರಮುಖ ಪುರಾತನ ಲಿಪಿ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿ ಒಂದೆನಿಸಿರುವ 11ನೇ ಶತಮಾನದ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಈ ಶಾಸನವನ್ನು 4 ಸಾಲುಗಳಲ್ಲಿ ಕೆತ್ತಲಾಗಿದೆ. ಎಂದು ತಿಳಿಸಿದ್ದಾರೆ.

ಶಾಸನದ ಕಾಲಃ ಈ ಶಿಲಾಶಾಸನದಲ್ಲಿ ತೇದಿಯನ್ನು ದಾಖಲಿಸಿರುವುದಿಲ್ಲ. ಆದ ಕಾರಣ ಖಚಿತವಾಗಿ ಕಾಲ ನಿರ್ಣಯ ಅಸಾಧ್ಯವೆಂದು ತಿಳಿಸಿರುವ ಸಂಶೋಧಕರು, ಇಲ್ಲಿ ಬಳಸಿರುವ ಹಳಗನ್ನಡ ಲಿಪ್ಯಕ್ಷರಗಳ ಸ್ವರೂಪ ಮತ್ತು ಗಾತ್ರಗಳ ಆಧಾರದ ಮೇಲೆ ಈ ಶಾಸನವನ್ನು ಕ್ರಿ.ಶ. 11ನೇ ಶತಮಾನದ ಆರಂಭದಲ್ಲಿ ರಚಿಸಲಾಗಿದೆ ಎಂದು ಅಂದಾಜಿಸಿದ್ದಾರೆ.

ಶಾಸನದ ಪೂರ್ಣ ಪಠ್ಯಃ ಭಾರತದ ಪ್ರಮುಖ ಲಿಪಿಗಳ ಸಾಲಿನಲ್ಲಿ ಐದನೇ ಸ್ಥಾನ ಪಡೆದಿರುವ ಹಳಗನ್ನಡ ಲಿಪಿಯ 4 ಸಾಲುಗಳಲ್ಲಿ ಕೊರೆದಿರುವ ಈ ಶಿಲಾಶಾಸನದ ಹೊಸಗನ್ನಡ ಪಠ್ಯದ ಪೂರ್ಣ ಪಾಠ ಇಂತಿದೆ.

ಶ್ರೀ ಸ್ವಸ್ತಿ
ಸಗ(ರ)ರದ ಓಂಕಾರ ದೇವರ ದ್ರವಿ
ಪ್ಪು ದೇವದುಗ್ರ್ಗ ರಾಮೇಸ್ವರ
ದ ಕೈರೇಗ ದೇವ ತೋ(ಟ)

ಶಾಸನದ ಅರ್ಥಃ ಈ ಶಿಲಾಶಾಸನವು ಸಗರದಲ್ಲಿನ ಓಂಕಾರೇಶ್ವರ ದೇವರಿಗೆ ದೇವದುರ್ಗದ ರಾಮೇಶ್ವರದಲ್ಲಿ ಬೆಲೆಬಾಳುವ ಅತ್ಯಮೂಲ್ಯ ಮರಗಳಿಂದ ಕೂಡಿದ ತೋಟವನ್ನು ಸಂಪತ್ತಾಗಿ ದತ್ತಿ ಬಿಟ್ಟಿರುವ ಅಂಶವನ್ನು ದಾಖಲಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿನ್ನೆಲೆ & ಮಾಹಿತಿ:

ಶಹಾಪುರದ ಸಗರಾದ್ರಿ ಬೆಟ್ಟದಲ್ಲಿ ಈವರೆಗೆ ಕೇವಲ ಪರ್ಶಿಯನ್ ಮತ್ತು ಅರೆಬಿಕ್ ಶಿಲಾಶಾಸನಗಳನ್ನು ಮಾತ್ರ ಶೋಧಿಸಲಾಗಿದೆ. ಈ ಶಾಸನವು ಸಗರಾದ್ರಿಯಲ್ಲಿ ಡಾ.ಎಂ.ಎಸ್.ಸಿರವಾಳ ಅವರು ಪತ್ತೆ ಮಾಡಿದ ಎರಡನೇ ಕನ್ನಡ ಶಾಸನವಾಗಿದೆ.

ಅಂದಿನ ಸಗರ ಪಟ್ಟಣವೇ ತದನಂತರದಲ್ಲಿ ಶಹಾಪುರವೆಂದು ಮರು ನಾಮಕರಣಗೊಂಡಿರುವುದು ಈ ಶಾಸನದಿಂದ ತಿಳಿದುಬರುತ್ತದೆ. ಸಗರ ಪಟ್ಟಣವು ಈ ಮೊದಲು ಸಗರಾದ್ರಿ ಬೆಟ್ಟದಲ್ಲಿ ಇತ್ತು ಎಂಬ ಖಚಿತ ಸ್ಥಳ ನಿವೇಶನವನ್ನು ಈ ಶಾಸನದಿಂದ ಗುರುತಿಸಬಹುದು.

ಕಾಲಾಂತರದಲ್ಲಿ ಸಗರಾದ್ರಿ ಬೆಟ್ಟದಲ್ಲಿ ಏಕವಾಗಿದ್ದ ‘ಸಗರ ಪಟ್ಟಣ’ ನಿರಂತರ ಶತ್ರುಗಳ ದಾಳಿಗೊಳಗಾಗಿ ಹಳಿಸಗರ, ದೊಡ್ಡ ಸಗರ ಮತ್ತು ಸಗರ ಎಂದು ಮೂರು ಭಾಗಗಳಾಗಿ ಹರಿದು ಹೋಗಿರುವುದು ಈ ಶಾಸನದಿಂದ ಗುರುತಿಸಬಹುದು. ಅಂದಿನ ಸಗರದಲ್ಲಿ ಓಂಕಾರೇಶ್ವರ ಎಂಬ ದೇವಸ್ಥಾನವಿತ್ತು. ಪ್ರಕೃತಿ ಪ್ರಿಯರಾಗಿದ್ದ ಅಂದಿನ ಜನ ಫಲಭರಿತ ಮರಗಳನ್ನು ತೋಟಗಳನ್ನು ಬೆಳೆಸಿ ದೇವಸ್ಥಾನಗಳಿಗೆ ದಾನ-ದತ್ತಿ ನೀಡುವುದು ಪುಣ್ಯದ ಕೆಲಸವೆಂದು ಭಾವಿಸಿದ್ದರು.

ಶಹಾಪುರ ಪಕ್ಕದ ತಾಲೂಕಾ ಕೇಂದ್ರ ‘ದೇವದುರ್ಗ’ ಹೆಸರಿನ ಸಾವಿರ ವರ್ಷಗಳ ಪುರಾತನತೆಗೆ ಈ ಶಿಲಾಶಾಸನ ಸಾಕ್ಷಿಯಾಗಿದೆ. ಓಂಕಾರೇಶ್ವರ ದೇವಾಲಯು ಅಂದಿನ ಕಾಲದ ಪ್ರಮುಖ ನಿಸರ್ಗದತ್ತ ವಿದ್ಯಾಕೇಂದ್ರವಾಗಿರಬೇಕು ಎಂದು ಊಹಿಸಬಹುದು. ಓಂಕಾರೇಶ್ವರ ದೇವಸ್ಥಾನ ಈ ಸಗರಾದ್ರಿ ಬೆಟ್ಟದ ಪ್ರದೇಶದಲ್ಲಿಯೇ ಇರಬಹುದು. ಹಿಂದಿನ ಯುದ್ಧ ಅಥವಾ ಕಾಲಘಟ್ಟ ಸಂದರ್ಭದಲ್ಲಿ ಹೂತಿರಬಹುದು ಈ ಪ್ರದೇಶದಲ್ಲಿ ಉತ್ಖನನ ಮಾಡಿದರೆ ಈ ಊಹೆ ನಿಜವಾಗುತ್ತದೆ.

ಅಂದಿನ ಕಾಲದ ಹಳಗನ್ನಡ ಭಾಷೆ ಮತ್ತು ಲಿಪಿ ಸ್ವರೂಪಗಳು ಈ ಶಾಸನದಿಂದ ನಮಗೆ ತಿಳಿಯುತ್ತವೆ. ಭಾಷಿಕವಾಗಿ ಈ ಶಾಸನವನ್ನು ಅಧ್ಯಯನ ಮಾಡಿದಾಗ ‘ಶ’ ಕಾರಕ್ಕೆ ಬದಲಾಗಿ ‘ಸ’ ಕಾರವನ್ನು (ರಾಮೇಸ್ವರ), ರಳ, ಶಕಟರೇಫೆ ಗಳನ್ನು ನಿಯಮಿತವಾಗಿ ಬಳಸುತ್ತಿದ್ದದು ಗೊತ್ತಾಗುತ್ತದೆ. ಒತ್ತಕ್ಷರಗಳ ಬಳಕೆ ಇರುವುದು ಸಹ ಈ ಶಾಸನ ಹೇಳುತ್ತದೆ. (ದುರ್ಗ-ದುಗ್ರ್ಗ). ಈ ಶಾಸನದ ಲಿಪಿಕಾರ ಅಷ್ಟೇನೂ ಪ್ರಬುದ್ಧ ಇಲ್ಲದಿರುವುದರಿಂದ ಅಲ್ಲಲ್ಲಿ ಅಕ್ಷರಗಳನ್ನು ತಪ್ಪಾಗಿ ಕೊರೆದಿರಬಹುದು.

ಅಂದಿನ ಕಾಲದ ಜನ ದಾನ-ಧರ್ಮ-ದತ್ತಿ, ಪಾಪ-ಪುಣ್ಯ, ನ್ಯಾಯ ಪರಿಪಾಲನೆಯ ಬಗ್ಗೆ ಶ್ರದ್ಧೆಯುಳ್ಳವರಾಗಿದ್ದರು. ಹೀಗೆ ಇನ್ನೂ ಹಲವಾರು ಮಹತ್ವಪೂರ್ಣವಾದ ಮಾಹಿತಿಗಳು ನಮಗೆ ಈ ಶಿಲಾಶಾಸನದಿಂದ ತಿಳಿದು ಬರುತ್ತವೆ ಎಂದು ಸಂಶೋಧಕ ಡಾ.ಎಂ.ಎಸ್.ಸಿರವಾಳ ತಿಳಿಸಿದ್ದಾರೆ.
ಶಿಲಾಸನದ ಮೇಲಿನ ಸಂಕೇತ ಚಿತ್ರಗಳುಃ ಈ ಶಿಲಾಶಾಸನದ ಮೇಲ್ಭಾಗದಲ್ಲಿ ಲಿಂಗ ಮತ್ತು ಸೂರ್ಯ-ಚಂದ್ರರ ಹಾಗೂ ಕೆಳಭಾಗದಲ್ಲಿ ಆಕಳು, ಕರು ಮತ್ತು ಖಡ್ಗಗಳ ರೇಖಾಚಿತ್ರಗಳನ್ನು ಕೊರೆಯಲಾಗಿದೆ.

ಲಿಂಗವು ಈ ಶಾಸನ ಶೈವರಿಗೆ ಸಂಬಂಧಿಸಿದ್ದು ಎಂಬುವುದನ್ನು ಪ್ರತಿನಿಧಿಸಿದರೆ, ಸೂರ್ಯ-ಚಂದ್ರರ ಶಿಲ್ಪವು ಈ ಶಿಲಾಶಾಸನ ಮತ್ತು ಅದರಲ್ಲಿ ಬಿಟ್ಟಿರುವ ತೋಟದ ದತ್ತಿ ಆಕಾಶದಲ್ಲಿ ಸೂರ್ಯ-ಚಂದ್ರರಿರುವ ತನಕ ಶಾಶ್ವತವಾಗಿ ಇರಲಿ ಎಂಬುವುದನ್ನು ಪ್ರತಿಬಿಂಬಿಸುತ್ತವೆ. ಶಾಸನದ ಕೆಳಭಾಗದಲ್ಲಿರುವ ಆಕಳು ಮತ್ತು ಕರುವಿನ ಚಿತ್ರಗಳು ಸತ್ಯ ಮತ್ತು ನ್ಯಾಯದ ಪ್ರತಿಪಾದನೆಯಾಗಿವೆ. ಖಡ್ಗವನ್ನು ಅನ್ಯಾಯಕ್ಕೆ ನೀಡುವ ಶಿಕ್ಷೆಯ ಸಂಕೇತದ ಪ್ರತಿನಿಧಿಯಾಗಿ ಬಳಸುತ್ತಿದ್ದರು ಎಂದು ಸಂಕೇತಗಳ ಹಿಂದೆ ಅಡಗಿರುವ ರಹಸ್ಯಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

– ಡಾ.ಮೋನಪ್ಪ ಶಿರವಾಳ, ಸಂಶೋಧಕರು, ಲೇಖಕರು

 •  
  2
  Shares
 • 2
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com