Connect with us
Loading...
Loading...

ಅಂಕಣ

ವಂದೇ ಮಾತರಂ ಹಾಡಲು, ಎದ್ದು ನಿಲ್ಲಲು ಮುಸಲ್ಮಾನರು ವಿರೋಧಿಸುತ್ತಿರೋದ್ಯಾಕೆ? ವಂದೇ ಮಾತರಂ ಹಾಡಿನಲ್ಲಿ ಇರುವ ಆ ತಾಕತ್ತಿನ ಬಗ್ಗೆ ಮುಸಲ್ಮಾನರು ಬೆದರುವುದ್ಯಾಕೆ ಗೊತ್ತಾ?

Published

on

 • 2.1K
 •  
 •  
 •  
 •  
 •  
 •  
 •  
  2.1K
  Shares

ವಂದೇ ಮಾತರಂ ಅಂದಾಕ್ಷಣ ಮನಃಪಟಲದಲ್ಲಿ ಮೂಡೋದು ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬರೆದ, ಸ್ವಾತಂತ್ರ್ಯ ಹೋರಾಟದಲ್ಲಿ ಕೋವಿ ಹಿಡಿದ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ ಐತಿಹಾಸಿಕ ಘಟನೆಗಳು. ಯಾವುದೇ ಹಿಂಸಾತ್ಮಕ ಭಾವನೆ ಇರದಿದ್ದರೂ ಭಾರತದ ಸ್ವಾತಂತ್ರ್ಯದ ರಣಘೋಷವೆಂದೇ ಕರೆಯಿಸಲ್ಪಟ್ಟ ಗರಿಮೆ ವಂದೇ ಮಾತರಂ ಅನ್ನುವ ಹಾಡಿನದ್ದು. ಕೇವಲ ತಾಯೇ ವಂದಿಸುವೆ ಅನ್ನುವ ಹಾಡು ಸೂರ್ಯ ಮುಳುಗದ ಸಾಮ್ರಾಜ್ಯದ ಆಧಿಪತಿ ಅಂತಾ ಆ ಕಾಲದಲ್ಲಿ ಮೆರೆಯುತ್ತಿದ್ದ ಬ್ರಿಟೀಷ್ ವಸಾಹತುಶಾಹಿ ನೀತಿಯ ಸಿಂಹಾಸನ ಅಲುಗಾಡಿವಷ್ಟರ ಮಟ್ಟಿಗೆ ಪ್ರಭಾವ ಬೀರಿತು ಅಂತಾದರೆ ಆ ಹಾಡಿನಲ್ಲಿರುವ ಶಕ್ತಿಯಾದರೂ ಎಂತಹುದಿರಬೇಕು !?

ತಾಯೇ ವಂದಿಸುವೆ ಅಂತಾ ಶುರುವಾಗುವ ಈ ಹಾಡು ಇಡೀ ಭಾರತದ ಜನರಿಗೆ ಆಪ್ಯಾಮಾನವಾಗಿತ್ತು ಅನ್ನೋದು ಅತಿಶಯೋಕ್ತಿ ಅಲ್ಲ ಅಥವಾ ಅದು ಯಾವುದೋ ಪವಾಡವೂ ಅಲ್ಲ.. ಆದರೆ ಅದು ಸೃಷ್ಟಿಸಿದ ಪ್ರಭಾವ ಮಾತ್ರ ಪವಾಡಗಳಿಗಿಂತಾ ಕಡಿಮೆಯಿಲ್ಲ. ಮೊದಲೇ ಹೇಳಿಕೇಳಿ ಭಾಷಾ ವೈವಿಧ್ಯತೆಯ, ಸಾಂಸ್ಕೃತಿಕ ವೈವಿಧ್ಯತೆಯ, ಚಿಕ್ಕಪುಟ್ಟ ಸಂಸ್ಥಾನಗಳಾಗಿದ್ದ  ಭರತಖಂಡವು ಒಂದು ಪೂರ್ಣ ಪ್ರಮಾಣದ ದೇಶವಾಗಿ ಮತ್ತೊಮ್ಮೆ ಹೊರಹೊಮ್ಮಲು ಸಿದ್ಧವಾಗುತ್ತಿದ್ದ ಕಾಲವದು. ಆ ಕಾಲಘಟ್ಟದಲ್ಲಿ  ಬಂಗಾಳಿ ಕವಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದ ಗೀತೆಯದು.

೧೮೮೨ರಲ್ಲಿ ಅವರು ಬರೆದ ‘ಆನಂದ ಮಠ’  ಅನ್ನುವ ಕೃತಿಯಲ್ಲಿ ಬಳಸಿದ್ದರು. ಬ್ರಿಟೀಷರ ವಿರುದ್ಧ ಹೋರಾಡುವ ಸನ್ಯಾಸಿಗಳ ಸೈನ್ಯದ ಕುರಿತಾದ ಕಾಲ್ಪನಿಕ ಕಾದಂಬರಿ ಅದಾಗಿತ್ತು. ಬಂಕಿಮಚಂದ್ರರ ಮರಣದ ನಂತರ  ೧೮೯೬ರಲ್ಲಿ ಕವಿ ರವಿಂದ್ರನಾಥ ಟಾಗೋರರು ಕಾಂಗ್ರೆಸ್ ಅಧಿವೇಶನದಲ್ಲಿ ಬಂಕಿಮರ ಬಂಗಾಳಿ ರಚನೆಯನ್ನು  ಹಾಡಿದರು. ಬಂಕಿಮರು ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಿತರಾಗಿ, ತಮ್ಮ ರೈಲು ಪ್ರಯಾಣದ ಹಾದಿಯಲ್ಲಿ ಮೈದುಂಬಿ ನಿಂತು ಮಾತೃವಾತ್ಸಲ್ಯ ಸೂಸುತ್ತಿದ್ದ ಪ್ರಕೃತಿಯನ್ನು ಕಂಡು ಪ್ರೇರಿತರಾಗಿ  ಬರೆದಿದ್ದೂ ಅನ್ನಲಾಗುತ್ತದೆ.

 


ಭಾರತದ ರಾಷ್ಟ್ರೀಯವಾದಿ ತತ್ವಜ್ಞಾನಿ ಅರವಿಂದ ಘೋಷರು ಅದನ್ನು ಬಂಗಾಳದ ರಾಷ್ಟ್ರೀಯ ಗೀತೆ ಅಂತಾ ಘೋಷಿಸಿ ಹೊಗಳಿದ್ದರು. ಆದರೆ ಬಂಗಾಳಿ ಮತ್ತು ಸಂಸ್ಕೃತ ಮಿಳಿತವಾಗಿದ್ದ ಬಂಕಿಮಚಂದ್ರರ ಗೀತೆಯನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಟಾಗೋರರು ಹಾಡಿದ ನಂತರ ಅದರ ಪರಿಷ್ಕರಿತ ಸಂಸ್ಕೃತ ಅನುವಾದ ಮಾಡಲಾಗಿ  ನಂತರ ಅದು ಸ್ವಾತಂತ್ರ್ಯ ಚಳುವಳಿಯ ತೀವ್ರಗಾಮಿ ಮತ್ತು ಮಂದಗಾಮಿ ಚಳುವಳಿಗಳ ಹೋರಾಟಗಾರರಿಗೆ ಪ್ರೇರಣಾಮಂತ್ರವಾಯಿತು. ಎಷ್ಟು ಪ್ರಮಾಣದಲ್ಲಿ ಸ್ವತಂತ್ರತೆಯ ಕಿಚ್ಚು ಹತ್ತಿಸಿತೆಂದರೆ ಬ್ರಿಟಿಷ್ ಸರಕಾರವು ಆ ಗೀತೆಯನ್ನು ಹಾಡುವುದೇ ಅಪರಾಧ ಅಂತಾ ಘೋಷಿಸಿತು. ಹಾಡು ಹಾಡಿದ ಕಾರಣಕ್ಕೆ ಚಳುವಳಿಗಾರರನ್ನು ಜೈಲಿಗೆ ಕಳುಹಿಸಿದ್ದು ಬ್ರಿಟಿಷ್ ಸರಕಾರಕ್ಕೆ ಎದೆನಡುಕ ಮೂಡಿಸಿದ್ದರ ಪೂರ್ಣ ಪಾಠ ಅನ್ನಬಹುದು.

ಅಷ್ಟಕ್ಕೂ ಮೂಲದಲ್ಲಿ ಕಾಳಿ/ದುರ್ಗಾದೇವಿಯ ವರ್ಣನೆಗೆ ಬಳಸಿದ್ದ ಆ ಹಾಡಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವ ಅಂಶಗಳಾದರೂ ಏನಿತ್ತು? ನೀವು ಸಾಮಾನ್ಯವಾಗಿ ಗಮನಿಸಿ. ಯಾವುದೇ ದೇಶದ ರಾಷ್ಟ್ರಗೀತೆ ಆ ದೇಶದ ಜನಮಾನಸದ ನವರಸಗಳನ್ನು ಪ್ರತಿಬಿಂಬಿಸುತ್ತವೆ. ಆ ದೇಶದ ಪರಂಪರೆಯನ್ನು, ಮೂಲ ಅಸ್ತಿತ್ವದ ಹೋರಾಟದ ಹಾದಿಯನ್ನು ಪ್ರತಿನಿಧಿಸುತ್ತೆ.

ಭಾರತದ ವಿಷಯಕ್ಕೆ ಬಂದರೆ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಅನ್ನೋದು ಪುರಾಣಪುರುಷ ರಾಮನ ಮಾತುಗಳು. ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು ಅನ್ನುವ ಚಿರಪರಿಚಿತ ಮಾತಿದು. ತಾಯಿ,ತಾಯ್ನಾಡಲ್ಲಿ ಸುಖವಿದೆ ಅನ್ನುವ ಭಾವನಾತ್ಮಕ ಪರಮಸತ್ಯ ಈ ಮಾತಲ್ಲಿದೆ. ಹಾಗೇ  ‘ತಾಯೇ ವಂದಿಸುವೆ’ ಅನ್ನುವ  ಹಾಡನ್ನು ತಾಯ್ನೆಲದ ವರ್ಣನೆಗೆ ಬಳಸುವ ಯೋಜನೆ ಟಾಗೋರರದ್ದಾಗಿತ್ತು. ಬಂಗಾಳಿ ಭಾಷೆಯ ಹಾಡಾಗಿದ್ದರೂ ವಿಫುಲ ಸಂಸ್ಕೃತದ  ಪದಗಳನ್ನೇ ಹೊಂದಿದ್ದ ಈ ಹಾಡು  ಪರಿಣಾಮಕಾರಿಯಾಗೇ ಬಳಕೆಯಾಗಲು ಕಾರಣ ಈ ನೆಲದ ಸಂಸ್ಕೃತಿ. ಪ್ರಕೃತಿಯಲ್ಲಿ ನೆಲ, ಜಲ, ಮರ, ಗಿಡದಲ್ಲಿ ಮಾತೃಸ್ವರೂಪವನ್ನು ಕಂಡು ಗೌರವಿಸುವ ಅನನ್ಯ ಪರಂಪರೆ ಈ ದೇಶದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿರೋದು. ನಮ್ಮನ್ನು ಪೊರೆಯುವ ಭೂಮಿಗೆ  ಕೃತಜ್ಞತೆ ಸಲ್ಲಿಸುವುದು ಇದರ ಉದ್ದೇಶ.

ವಂದೇ ಮಾತರಂ ಅನ್ನೋ ಹಾಡು ಈ ಭೂಮಿಯನ್ನು ತಾಯಿಯಂತೆ ಪೂಜಿಸುವ, ಮಾತೃಸ್ವರೂಪದಲ್ಲಿ ಪರಿಗಣಿಸುವ ವೇದಕಾಲದಿಂದ ಹಿಡಿದು ಆಧುನಿಕ ತತ್ವಜ್ಞಾನಿಗಳವರೆಗಿನ ಪರಿಕಲ್ಪನೆಗೆ ಮತ್ತೆ ನೀರೆರೆದು ಪೋಷಿಸಿತು . ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೂಡಿದ ನಾವೆಲ್ಲಾ ಒಂದಾಗಿ ಹೋರಾಡಬೇಕೆಂಬ ಏಕತೆಯ ಪ್ರತಿಬಿಂಬವಾಗಿ ಅನುರಣಿಸಲು ವಂದೇ ಮಾತರಂ ಸಿದ್ಧವಾಗಿತ್ತು. ಸಹಜವಾಗೇ ಭಾರತವು ತಾಯಿಯಾಗಿ, ಜನರು ಅವಳ ಮಕ್ಕಳಾಗಿ ಪ್ರತಿಬಿಂಬಿಸಲು ಹಾತೊರೆದು ಸ್ವಾತಂತ್ರ್ಯದ ರಣಕಹಳೆಗೆ ನಾಂದಿ ಹಾಡಿತು. ಜಾತಿ,ಮತ ಮರೆತು ಮಾತೆಯ ರಕ್ಷಣೆಗಾಗಿ ಕಟಿಬದ್ಧರಾದ ಭಾರತೀಯರ ದಂಡು ಸಿದ್ಧವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಮಾತೆಯ ರಕ್ಷಣೆಗೆ ಯಾವುದೇ ಬೆಲೆ ತೆರಲು ಸಿದ್ಧವಾಗಿ ನಿಲ್ಲುವೆವು, ಆಕೆಯ ಆಶೀರ್ವಾದವೇ ನಮ್ಮ ಶಕ್ತಿ ಎಂದು ಕರೆಯುತ್ತಾ ರಾಷ್ಟ್ರವನ್ನು ದೇವತೆಯಂತೆ ಕಂಡು ಪೂಜಿಸುವ ರಾಷ್ಟ್ರೀಯ ಏಕತಾವಾದ ಮೊಳಕೆ ಒಡೆಯಲು ಪ್ರೇರಣೆ ದೊರಕಿದ್ದು ವಂದೇ ಮಾತರಂ ಗೀತೆಯ ಗೆಲುವಾಗಿತ್ತು.

ಸಂತ ಅರವಿಂದರು ಹೇಳಿದಂತೆ – ‘ಮಂತ್ರಘೋಷ ಸಿಕ್ಕಿತು. ತಾಯಿ ಪ್ರತ್ಯಕ್ಷಳಾದಳು. ಇನ್ನು ಅವಳ  ಮೂರ್ತಿಯ ಕಡೆದು ನಿಲ್ಲಿಸುವವರೆಗೆ ಎಲ್ಲಿಯ ವಿಶ್ರಾಂತಿ !? ‘ ಅನ್ನೋ ಸಾಲುಗಳನ್ನು ಜನರು ಅಕ್ಷರಶಃ ತಮ್ಮ ಜೀವನಧರ್ಮವಾಗಿ ಪರಿಗಣಿಸಿ ಅಪ್ಪಿಕೊಂಡು ವಂದೇ ಮಾತರಂ ರಾಷ್ಟ್ರೀಯ ಏಕತೆ ಮತ್ತು  ಸ್ವಾತಂತ್ರ್ಯದ ರಣಘೋಷವಾಗಿ ಮಾರ್ಪಟ್ಟಿತು.

ಅದಕ್ಕೂ ಮೊದಲು ವಿವೇಕಾನಂದರು ಹೇಳಿದ್ದರು ‘ನಮ್ಮ ಭಾರತಮಾತೆಯು ಯುಗಾಂತರದ ನಿದ್ರೆಯಿಂದ ಮೇಲೇಳುತ್ತಿದ್ದಾಳೆ. ಆಕೆಯನ್ನು ಇನ್ನು ತಡೆಯುವರಾರು?  ಇನ್ನವಳು ನಿದ್ರಿಸುವುದಿಲ್ಲ. ಯಾವುದೇ ಶಕ್ತಿಯೂ ಆಕೆಯನ್ನು ಇನ್ನು ತಡೆಯಲಾರದು..   ಅದೋ ನೋಡಿ ..ಮಹಾಕಾಳಿ ಮತ್ತೊಮ್ಮೆ ಎಚ್ಚೆತ್ತು ಮೈಕೊಡವಿ  ನಿಲ್ಲುತ್ತಿರುವಳು.’ ಅಕ್ಷರಶಃ ಈ ಮಾತುಗಳ ಪ್ರತಿಧ್ವನಿಯಾಗಿ ವಂದೇಮಾತರಂ ಉದಯಿಸಿತ್ತು  ಈ ನೆಲದ ಸಂಸ್ಕೃತಿ ,ಸೌಂದರ್ಯ, ಸಹಿಷ್ಣುತೆಗಳ ಮೇರೆಯ ಎಚ್ಚರಿಕೆಯ ಗಂಟೆ ಮೊಳಗಿಸುತ್ತಾ , ದುಷ್ಟರ ಧಮನಕ್ಕೆ ಶಸ್ತ್ರವನ್ನೆತ್ತಿದ ದುರ್ಗೆಯ ಅಶರೀರ ದರ್ಶನ ಬ್ರಿಟಿಷರಿಗೆ ಆಗಿತ್ತು.

 


ಮೂಲದಲ್ಲಿ ಬಂಗಾಳಿ ಭಾಷೆಯ ಹಾಡನ್ನು ಬಂಗಾಳದ ರಾಷ್ಟ್ರಗೀತೆ ಅನ್ನೋ   ರಾಷ್ಟ್ರೀಯವಾದಿ ಸಂತ ಅರವಿಂದರ ಮಾತು ಉಲ್ಲೇಖಿಸಿ ಅದು ಬೆಂಗಾಳಿಗಳ ರಾಷ್ಟ್ರಗೀತೆ, ಭಾರತದ್ದಲ್ಲ  ಅನ್ನೋ ಅಪಪ್ರಚಾರ ನಡೆಸಲೂ ಬ್ರಿಟಿಷ್ ಸರಕಾರ ಹೇಸಲಿಲ್ಲ. ‘ ಬಂಕಿಮಚಂದ್ರ ಒಬ್ಬ  ಮುಸಲ್ಮಾನರ ವಿರೋಧಿ, ಅವರು ರಚಿಸಿದ ಗೀತೆ ನೀವು ಹಾಡುವಿರಾ? ‘ ಅಂತಾ ಕೆಲವರು ಕುತಂತ್ರ ಹೆಣೆದರೂ  ವಂದೇ ಮಾತರಂ ವಿರೋಧಿಸಲು ‘ಭಾರತೀಯತೆಯ ಆತ್ಮ ‘ ಹೊಂದಿದ್ದ ಜನಸಮೂಹ ತಯಾರಾಗದೇ ಇದ್ದುದು ಸ್ವಾತಂತ್ರ್ಯದ ಹೋರಾಟದ ಕಿಚ್ಚಿಗೆ ಬಲಿಷ್ಠವಾದ ತಳಹದಿಯನ್ನೇ ಹಾಕಿಬಿಟ್ಟಿತು.

ವಿಪರ್ಯಾಸವೆಂದರೆ ಇಡೀ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತೀಯತೆಯ ಹುಚ್ಚುಹೊಳೆ ಹರಿಸಿದ ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಹತ್ತಿರವಾಗುತ್ತಲೇ ಧಾರ್ಮಿಕ ವಿರೋಧದ ಬಣ್ಣ ಪಡೆಯುತ್ತಾ ದೇಶವಿಭಜಕ ಅಜೆಂಡಾ ಹೊಂದಿದ್ದವರ ಕುಂಟುನೆಪಗಳಿಗೆ, ವಿರೋಧಗಳಿಗೆ ಬಲಿಯಾಗಿದ್ದು. ಉಂಡೂ ಹೋದ, ಕೊಂಡೂ ಹೋದ ಎಂಬಂತೆ ಮೊಹಮ್ಮದಾಲಿ ಜಿನ್ನಾ ಪಾಕಿಸ್ತಾನವನ್ನು ಪಡೆಯುವುದರ ಜೊತೆಗೇ ವಂದೇ ಮಾತರಂ ವಿರೋಧವನ್ನೂ ಭಾರತದಲ್ಲಿ ಬಿತ್ತಿ ಹೋಗಿದ್ದು. ಆದರೂ ಕೊನೆಗೆ ಭಾರತದ ಸಂವಿಧಾನದ ಆಶಯದಂತೆ ಯಾವುದೇ ನಿರ್ದಿಷ್ಟ ಮತಧರ್ಮಕ್ಕೆ ಧಕ್ಕೆ ಬಾರದಂತೆ  ಟಾಗೋರರ ‘ಜನಗಣಮನ’ ಬಂಗಾಳಿ ಗೀತೆಯ ಮೊದಲ ಚರಣವನ್ನು ರಾಷ್ಟ್ರಗೀತೆಯಾಗಿಯೂ ಬಂಕಿಮರ ‘ವಂದೇ ಮಾತರಂ ‘ ಹಾಡಿನ ಮೊದಲ ಚರಣವನ್ನು ರಾಷ್ಟ್ರಗಾನವಾಗಿ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರಿಂದ  ಆರಿಸಲ್ಪಟ್ಟಿದ್ದು ಒಂದಷ್ಟು ಸಮಾಧಾನಕರ ವಿಷಯ.

 

ಕೊನೆ ಮಾತು: ಈಗಲೂ ವಂದೇ ಮಾತರಂ ಅಂದಾಕ್ಷಣ ಕೆಲವರಿಗೆ ವಿವಾದಿತ ವಿಷಯ ಆಗಿಬಿಡುತ್ತೆ. ವಂದಿಸುವುದು ಅಂದರೆ ಧಾರ್ಮಿಕ ಅರ್ಥದ  ಪೂಜೆಯೇ? ಪುನಸ್ಕಾರವೇ?

ಸಾಮಾನ್ಯವಾಗಿ ವಂದನೆ ಅನ್ನುವುದು ಕೃತಜ್ಞತೆ, ಗೌರವದ, ಅತೀವ ಆತ್ಮೀಯತೆಯ  ಸಂಕೇತವಾಗಿ ಬಳಸುವ ಪದ. ಆದರೆ ಮತೀಯವಾದ ಧಾರ್ಮಿಕ ಪರಿಭಾಷೆಯಲ್ಲಿ ಅದರಲ್ಲಿರುವ ಭಾವನೆಗಿಂತಾ ಅದು ಯಾರು, ಯಾಕೆ, ಯಾವಾಗ ಬಳಸಿದ್ದು  ಅನ್ನುವತ್ತಲೇ  ಜನರ ಚಿತ್ತ. ಅವರವರ ಭಾವ ಮತ್ತು ಭಕುತಿಗೆ ತಕ್ಕಂತೆ ಅನ್ನುವುದೇ ವಿವಾದಗಳಿಗೆ ಕಾರಣ.

– ಸುಜಿತ್ ಶೆಟ್ಟಿ

27/03/2018 ರ “ಕುರುಕ್ಷೇತ್ರ” ವಾರಪತ್ರಿಕೆಯಲ್ಲಿ ಪ್ರಕಟವಾದ ಅಂಕಣ

 •  
  2.1K
  Shares
 • 2.1K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com